ಕುಶಾಲನಗರ, ಜ. ೧೭: ೪ ಅಡಿ ಎತ್ತರದ ಒಂದೇ ಗೊನೆಯಲ್ಲಿ ೬೦ ಕೆಜಿ ರಸಬಾಳೆ ಫಸಲು ಸ್ಥಳೀಯ ಕೃಷಿಕರೊಬ್ಬರ ತೋಟದಲ್ಲಿ ನೋಡು ಗರನ್ನು ಆಶ್ಚರ್ಯ ಚಕಿತಗೊಳಿಸಿದೆ. ಕುಶಾಲನಗರ ನಿವಾಸಿ ಶರಣ ಸಾಹಿತ್ಯ ಪರಿಷತ್‌ನ ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಪಿ.ಮಹದೇವಪ್ಪ ಅವರ ಬಾಳೆ ತೋಟದಲ್ಲಿ ಈ ಬಾಳೆಗೊನೆ ಬೆಳೆದು ನಿಂತಿದೆ. ಬಾಳೆಗೊನೆಯನ್ನು ಮಹದೇವಪ್ಪ ಅವರು ಕುಶಾಲನಗರದ ತಮ್ಮ ನಿವಾಸದಲ್ಲಿ ಇಟ್ಟಿದ್ದು ಇದೀಗ ಈ ಬಾಳೆಗೊನೆ ಅಕ್ಕಪಕ್ಕದ ಮನೆಮಂದಿ, ಮಕ್ಕಳಿಗೆ ವಿಶೇಷ ಆಕರ್ಷಣೆಯ ಸಂಗತಿಯಾಗಿದೆ.

ಮಿಶ್ರ ಬೆಳೆ ಕೃಷಿ ಕೈಗೊಂಡಿರುವ ಮಹದೇವಪ್ಪ ಅವರ ತೋಟದಲ್ಲಿ ಇದಕ್ಕೂ ಮೊದಲು ಇದೇ ಮಾದರಿಯ ೬೦ ಕೆ.ಜಿ. ತೂಕದ ಬಾಳೆ ಫಸಲು ಲಭಿಸಿತ್ತು ಎಂದು ಶಕ್ತಿಯೊಂದಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿಕೊಂಡ ಅವರು ಕೃಷಿ ಚಟುವಟಿಕೆಯಲ್ಲಿ ಆಸಕ್ತಿಯಿಂದ ಬೆಳೆ ಬೆಳೆಸುವ ಮೂಲಕ ಇಂತಹ ಫಸಲು ಪಡೆಯಲು ಸಾಧ್ಯ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.