ಮಡಿಕೇರಿ, ಜ. ೧೭: ಕೇಂದ್ರ ಸರ್ಕಾರವು ಏಕಾಏಕಿ ಮೂರು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಮಾಜಿ ಸಂಸದ ಧ್ರುವನಾರಾಯಣ್ ಈ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ನಿAದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾಯ್ದೆಯನ್ನು ಜಾರಿಗೊಳಿಸುವ ಮೊದಲು ಅದರ ಬಗ್ಗೆ ಚರ್ಚೆಯಾಗಬೇಕು. ಸಂಘಟನೆಗಳ ಅಭಿಪ್ರಾಯ ಪಡೆಯಬೇಕು. ಆದರೆ, ಕೇಂದ್ರ ಸರ್ಕಾರ ಇದ್ಯಾವುದನ್ನೂ ಮಾಡದೆ ರೈತವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿದೆ. ಈಗಾಗಲೇ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅದಕ್ಕೆ ಬೆಂಬಲ ಸೂಚಿಸಿ ಕಾಂಗ್ರೆಸ್ನಿAದ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ತಾ. ೨೦ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಪ್ರತಿಭಟನೆ ನಡೆಯಲಿದೆ. ಬಳಿಕ ರಾಜಭವನಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದರು.
ಸರ್ಕಾರ ಸರ್ಕಾರಿ ಸಂಸ್ಥೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ನ್ಯೂನತೆಗಳನ್ನು ಸರಿಪಡಿಸಬೇಕು. ಆದರೆ, ಕೇಂದ್ರ ಸರ್ಕಾರ ಎಪಿಎಂಸಿಯನ್ನು ಮೂಲೆಗುಂಪು ಮಾಡಲು ಹೊರಟಿದೆ ಎಂದು ಆರೋಪಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸುಮಾರು ೬೦ ಮಂದಿ ಬಲಿಯಾಗಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ ಮಾನವೀಯತೆ ದೃಷ್ಟಿಯಿಂದಲೂ ನೇರವಾಗಿ ರೈತರೊಂದಿಗೆ ಸಂವಾದ ಮಾಡಲಿಲ್ಲ.
ಈಗಾಗಲೇ ಸುಪ್ರಿಂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ರೈತರ ಹೋರಾಟಕ್ಕೆ ಇಡೀ ದೇಶದಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದು, ಕೇಂದ್ರ ಸರ್ಕಾರ ಕಾಯ್ದೆಯನ್ನು ವಾಪಾಸ್ ಪಡೆಯಲೇ ಬೇಕಾಗುತ್ತದೆ ಎಂದ ಅವರು, ತೈಲ ಬೆಲೆ ಏರಿಕೆ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದರು.
ಸಿಡಿ ಬಗ್ಗೆ ತನಿಖೆಯಾಗಲಿ..!ರಾಜ್ಯದಲ್ಲಿ ಸಿಡಿ ವಿಚಾರದ ಬಗ್ಗೆ ವ್ಯಾಪಾಕ ಚರ್ಚೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತನಿಖೆಗೆ ಆಗ್ರಹಿಸಿದ್ದಾರೆ. ಸಿಡಿ ಆರೋಪವನ್ನು ಕಾಂಗ್ರೆಸ್ ಮಾಡಿಲ್ಲ. ಮಾಜಿ ಕೇಂದ್ರ ಸಚಿವ ಯತ್ನಾಲ್, ಮಾಜಿ ಸಂಸದ ವಿಶ್ವನಾಥ್ ಅವರೇ ಸಿಡಿ ಆರೋಪ ಮಾಡಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರುವ ಹಿರಿಯರು ಸುಮ್ಮನೆ ಹೇಳಿಕೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಧ್ರುವನಾರಾಯಣ ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ಕುಮಾರ್, ಜಿಲ್ಲಾ ಖಜಾಂಚಿ ನಂದಕುಮಾರ್, ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಮ್ಯಾಥ್ಯೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.