ಗೋಣಿಕೊಪ್ಪ ವರದಿ, ಜ. ೧೭: ಜೇನು ಕೃಷಿ ಪಾಲನೆಯಿಂದ ಕಾಫಿ ಮತ್ತು ಇತರ ಬೆಳೆಗಳ ಇಳುವರಿಯಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ. ಜಿ. ಕುಶಾಲಪ್ಪ ಹೇಳಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ವಿಸ್ತರಣಾ ಶಿಕ್ಷಣ ಘಟಕ ಹಾಗೂ ಕೊಡಗು ವುಮೆನ್ಸ್ ಕಾಫಿ ಅವೇರ್‌ನೆಸ್ ಸಂಘಟನೆ ಆಶ್ರಯದಲ್ಲಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೇನು ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜೇನು ಕೃಷಿಯಿಂದ ಕಾಫಿ ಮತ್ತು ಇತರ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ. ಕೊಡಗಿನಲ್ಲಿ ಜೇನು ಕೃಷಿಗೆ ವಿಫುಲ ಅವಕಾಶಗಳಿದ್ದು, ವೈಜ್ಞಾನಿಕ ಜೇನು ಕೃಷಿಯೊಂದಿಗೆ ಮುಂದುವರಿಯ ಬೇಕಿದೆ. ಕೊಡಗಿನ ಜೇನಿನ ಉತ್ಪಾದನೆ ಕುಂಠಿತವಾಗಿದೆ. ಜೇನು ಕೃಷಿಯ ಮಹತ್ವ ಅರಿತು ಮುಂದು ವರಿಯಬೇಕು ಎಂದು ಸಲಹೆ ನೀಡಿದರು.
ಕೊಡಗು ವುಮೆನ್ಸ್ ಕಾಫಿ ಅವೇರ್‌ನೆಸ್ ಸಂಘಟನೆ ಕಾರ್ಯದರ್ಶಿ ಅನಿತಾ ನಂದಾ ಮಾತನಾಡಿ, ಕಾಫಿ ಬೆಳೆಯಲ್ಲಿ ಜೇನು ನೊಣಗಳ ಪಾತ್ರದಿಂದ ಪರಾಗಸ್ಪರ್ಶಗೊಂಡು ಇಳುವರಿ ತೆಗೆಯಲು ಕಾರಣವಾಗುತ್ತಿದೆ. ಇದರ ನಿರ್ವಹಣೆಗೆ ಅಸಕ್ತಿ ತೋರಬೇಕು ಎಂದರು.
ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚಾರೆಡ್ಡಿ ಮಾತನಾಡಿ, ಸ್ವಉದ್ಯೋಗವಾಗಿ ಜೇನು ಕೃಷಿಯನ್ನು ಅವಲಂಭಿಸುವ ಆಸಕ್ತರಿಗೆ ೩ ತಿಂಗಳ ತರಬೇತಿ ನೀಡಲಾಗುವುದು. ಅವರಿಗೆ ರೂ. ೭,೫೦೦ ತರಬೇತಿ ಭತ್ಯೆ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು. ಜೇನು ಕೃಷಿಯ ಪ್ರಯೋಜನಗಳು, ಜೇನು ನೊಣಗಳ ಪ್ರಬೇಧಗಳು, ಜೇನು ಕೃಷಿಯನ್ನು ಪ್ರಾರಂಭಿಸುವ ವಿಧಾನದ ಬಗ್ಗೆ ಅರಿವು ಮೂಡಿಸಿದರು.
ನೈಸರ್ಗಿಕ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ, ಕೊಡಗು ವುಮೆನ್ಸ್ ಕಾಫಿ ಅವೇರ್‌ನೆಸ್ ಸಂಘಟನೆಯ ಪ್ರಮುಖರಾದ ಸುಮಿ ಸುಬ್ಬಯ್ಯ, ಜುಥಿಕಾ ಬೋಪಣ್ಣ ಇದ್ದರು.