ಶನಿವಾರಸಂತೆ, ಜ. ೧೭: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿ, ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ೩೦ ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಹೊಂದಿರುವ ಬೃಹತ್ ಹಾಗೂ ಉತ್ತಮವಾದ ಕೆರೆಯಲ್ಲಿ ಹೂಳು ತುಂಬಿದ್ದು, ಹೆಚ್ಚಿನ ನೀರು ಸಂಗ್ರಹಣೆ ದೃಷ್ಟಿಯಿಂದ ಅಭಿವೃದ್ಧಿಪಡಿಸಬೇಕಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಕಾಮಗಾರಿ ಕೈಗೊಳ್ಳಲಾಗಿದ್ದು, ಹೂಳು ತೆಗೆಯುವುದು, ಕಾಡು ಕಡಿಯುವುದು, ಏರಿ ಕುಸಿಯದಂತೆ ತಡೆಗೋಡೆ ಮತ್ತು ದ್ವಾರ ನಿರ್ಮಾಣ, ಸೋಪಾನಕಟ್ಟೆ ತೂಬು, ಕೋಡಿ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳು ನಡೆಯಲಿವೆ ಎಂದರು.

ಕೊಡ್ಲಿಪೇಟೆಯ ವ್ಯಾಪ್ತಿಯಲ್ಲಿರುವ ಈ ಕೆರೆಯಿಂದ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಅನುಕೂಲವಾಗುತ್ತದೆ. ಕೆರೆಯ ಸುತ್ತಲು ವಾಯು ವಿಹಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರಫೀಕ್, ಇತರ ಅಧಿಕಾರಿಗಳು, ಪ್ರಮುಖರಾದ ನಾಗರಾಜ್, ಯತೀಶ್, ನಾಗೇಶ್, ಭಗವಾನ್, ವರಪ್ರಸಾದ್ ಹಾಜರಿದ್ದರು.