ಕಣಿವೆ, ಜ. ೧೭: ಕಾಡಾನೆಗಳು ಕೊಡಗು ಜಿಲ್ಲೆಯ ಬಹುತೇಕ ಪ್ರದೇಶಗಳ ರೈತರ ನೆಮ್ಮದಿಯನ್ನು ಕೆಡಿಸಿರುವುದು ಪ್ರಸ್ತುತದ ಬಹು ದೊಡ್ಡ ಸಮಸ್ಯೆಯೇ ಸರಿ. ಅರಣ್ಯ ಇಲಾಖಾಧಿಕಾರಿಗಳಾಗಲಿ, ಜನಪ್ರತಿ ನಿಧಿಗಳಾಗಲಿ ಇದೊಂದು ‘‘ನಿತ್ಯ ಭವಿಷ್ಯ’’ ಎಂಬAತೆ ಮೌನ ವಹಿಸಿದ್ದಾರೆ.
ಮರಗಳ ಕಳ್ಳ ಸಾಗಾಣಿಕೆ, ಭೂ ಒತ್ತುವರಿ, ಮಿತಿಮೀರಿದ ಗಣಿಗಾರಿಕೆ ಹಾಗೂ ಅಭಿವೃದ್ಧಿ ಯೋಜನೆಗಳಿಗೆಲ್ಲಾ ಅರಣ್ಯವನ್ನು ಕಬಳಿಸುತ್ತಲೇ ಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶ ಸಹಜವಾಗಿಯೇ ಕ್ಷೀಣಿಸುತ್ತಿದೆ. ಪರಿಣಾಮವಾಗಿ ವನ್ಯಮೃಗಗಳು ನೆಲೆ ಕಂಡುಕೊಳ್ಳಲು ಹಾಗೂ ಹಸಿವು, ದಾಹ ನೀಗಿಸಿಕೊಳ್ಳಲು ನಾಡಿಗೆ ಲಗ್ಗೆ ಇಡುತ್ತಿವೆ. ದಶಕಗಳ ಹಿಂದೆ ಕಾಡಾನೆಗಳ ಹಿಂಡು ಹಗಲು ಹಳ್ಳಿಗಳತ್ತ ಮುಖ ಮಾಡುತ್ತಿದ್ದುದು ಅಪರೂಪವಾಗಿತ್ತು. ಆದರೆ ಈಗ ಹಾಡ ಹಗಲೇ ಕಾಡಾನೆಗಳು ನಾಡಿನತ್ತ ಮುಖ ಮಾಡುತ್ತಿದ್ದು, ರೈತರಷ್ಟೇ ಅಲ್ಲ ನಿವಾಸಿಗಳ ನೆಮ್ಮದಿ ಯನ್ನೂ ಕಸಿದಿದೆ. ಆದರೆ ಅರಣ್ಯ ಇಲಾಖೆಯಾಗಲೀ, ಜನಪ್ರತಿನಿಧಿ ಗಳಾಗಲೀ ಈ ಕಾಡಾನೆಗಳ, ರೈತರ ಆಕ್ರಂದನವನ್ನು ಅರಿಯುತ್ತಲೇ ಇಲ್ಲ.
ಕೊಡಗಿನ ಬಹುತೇಕ ಅರಣ್ಯ ಪ್ರದೇಶಗಳ ತೀರದ ಜನವಸತಿ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ನಿತ್ಯವೂ ಬಿಡದೇ ಕಾಡುತ್ತಿದೆ.
ಇಲ್ಲಿ ಕಾಡಾನೆಗಳ ಸಂತತಿ ಹೆಚ್ಚಾಗಿದೆಯೋ..? ಇಲ್ಲವೇ ಕಾಡಾನೆಗಳ ಹಾವಳಿ ಹೆಚ್ಚಾಗಿದೆಯೋ ಎಂಬುದು ಕೊಡಗು ಜಿಲ್ಲೆಯ ಜನರ ಮುಂದಿರುವ ಪ್ರಶ್ನೆ..!
ಆದರೆ ಕೂಲಂಕಷವಾಗಿ ಪರಿಶೀಲಿಸಿದಾಗ ಕಾಡಾನೆಗಳ ಸಂತತಿ ಹೆಚ್ಚಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ವಾಸ್ತವ.
ಕಾಡಾನೆಗಳ ಹಾವಳಿ ಎಂಬುದು ಇಂದು ಮತ್ತು ನಿನ್ನೆಯ ಸಮಸ್ಯೆ ಅಲ್ಲವೇ ಅಲ್ಲ. ಅದೂ ಬಹಳ ಹಿಂದಿನಿAದಲೂ ಇದೆ. ಕಳೆದ ಮೂರು ದಶಕಗಳ ಈಚೆಗೆ ಒಂದಷ್ಟು ಹೆಚ್ಚಾಗಿಯೇ ಇದೆ.
ಕಾಡಾನೆಗಳ ಹಾವಳಿ ಭತ್ತದ ಫಸಲಿನ ಸಂದರ್ಭದಲ್ಲಿ ಹೆಚ್ಚಾಗಲು ಕಾರಣವೇನು ? ಎಂಬ ಪ್ರಶ್ನೆಗೆ ಉತ್ತರವನ್ನು ಅರಸಿ ಕಾಡಿನೊಳಗೆ ತೆರಳಿದಾಗ ಕಾಣುವ ನಗ್ನ ಸತ್ಯವಿದೆಯಲ್ಲಾ ? ಅದು ವ್ಯವಸ್ಥೆಯ ಮೇಲೆ ಆಕ್ರೋಶವನ್ನು ಮೂಡಿಸುತ್ತದೆ. ಕಾಡಾನೆಗಳ ಹಾವಳಿ ಹೆಚ್ಚಾಗಲು ಅರಣ್ಯ ಇಲಾಖೆಯೇ ಕಾರಣ ಹೊರತು ಬೇರೆ ಯಾರೂ ಕೂಡ ಅಲ್ಲ...!
ದೊಡ್ಡ ಹೊಟ್ಟೆಯ ಕಾಡಾನೆಗಳಿಗೆ ಅರಣ್ಯದೊಳಗೆ ಯಾವುದೇ ಆಹಾರ ಸಿಗದ ಕಾರಣ ಹಗಲಿಡೀ ಅರಣ್ಯದ ಗಿಡ, ಮರಗಳ ಪೊದೆಗಳ ಬಳಿ ಕಾಲಹರಣ ಮಾಡುತ್ತಾ, ಬೆಳಕು ಸರಿಸಿ ಕತ್ತಲೆ ಆವರಿಸಲೆಂದು ಸೂರ್ಯ ದೇವನಿಗೆ ಒಂದಷ್ಟು ಶಪಿಸುತ್ತಾ ಜಪಿಸುತ್ತಾ ಕಾಲಹರಣ ಮಾಡುವ ಈ ಕಾಡಾನೆಗಳು ಮಬ್ಬುಗತ್ತಲು ಆವರಿಸಿದೊಡನೆ ಒಂದೇ ಸಮನೆ ನಾಡಿಗೆ ಲಗ್ಗೆಯಿಟ್ಟು ರೈತಾಪಿ ಜನರು ಬೆಳೆವ ಬೆಳೆಗಳನ್ನು ತಿಂದು ಮತ್ತು ತುಳಿದು ನಾಶ ಮಾಡಿ ಹಸಿವಾದ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿವೆ.
ದಿನವೊಂದಕ್ಕೆ ಕಾಡಾನೆಗಳಿಗೆ ೪೦೦ ರಿಂದ ೫೦೦ ಕೆಜಿ ಆಹಾರ ಬೇಕು. ೨೫೦ ರಿಂದ ೩೦೦ ಲೀಟರ್ ನಷ್ಟು ಕುಡಿಯುವ ನೀರು ಬೇಕು. ಆದರೆ ಈ ಕಾಡಾನೆಗಳ ಹೆಸರಿನಲ್ಲಿ ಕರ್ತವ್ಯ ಪಾಲನೆ ಮಾಡುತ್ತಿರುವ ಅರಣ್ಯ ಹಾಗೂ ವನ್ಯ ಜೀವಿ ವಿಭಾಗದ ಅಧಿಕಾರಿಗಳು ಕಾಡಿನೊಳಗೆ ಕಾಡಾನೆಗಳಿಗೆ ಬೇಕಾದಂತಹ ಸೊಪ್ಪು - ಸೆದೆಗಳ ಗಿಡಗಳನ್ನು ನೆಟ್ಟು ಬೆಳೆಸುತ್ತಿಲ್ಲ. ಕಾಡಾನೆಗಳ ಹಸಿವು ನೀಗಿಸಲು ಉಪಯುಕ್ತವಾಗಬಲ್ಲಂತಹ ತೊಗಟೆ ಇರುವಂತಹ ಮರಗಳು ಕಾಡಿನೊಳಗೆ ಮೊದಲೇ ಇಲ್ಲ. ಇದ್ದಂತಹ ಅಳಿದುಳಿದ ಮರಗಳು ಕಳ್ಳಸಾಗಾಣಿಕೆದಾರರ ಪಾಲಾದವು. ಈ ನಡುವೆ 'ಶುಂಠಿ' ಎಂಬ ಸುಂದರ ಹೆಸರು ಕೊಡಗಿನಾದ್ಯಂತ ರಾರಾಜಿಸುತ್ತಿದ್ದಂತೆಯೇ ಕೊಡಗಿನ ಸಾಕಷ್ಟು ಮಂದಿ ತಮ್ಮ ಬಳಿ ಅಳಿದುಳಿದಿದ್ದ ಕಾಡು ಜಾಗವನ್ನು ಕೇರಳದವರಿಗೆ ಕರೆ ಕರೆದು ಕೊಟ್ಟರು.
ಮಣ್ಣನ್ನು ಹೊನ್ನು ಮಾಡುವ ಭರದಲ್ಲಿ ಕಾಡು ಮಟ್ಟಸಮವಾಯಿತು.
"ಕಾಡು ಉಳಿಸಿ - ನಾಡು ಬೆಳೆಸಿ" ಎಂಬ ವಾಕ್ಯ ಕೇವಲ ಅರಣ್ಯ ಇಲಾಖೆಯ ಫಲಕಗಳಲ್ಲಿ ರಾರಾಜಿಸಿತೇ ಹೊರತು ಅದನ್ನು "ಕಾಡು ಕಡಿದು ನಾಡು ಉಳಿಸಿ" ಎಂದು ತಿದ್ದಿಕೊಳ್ಳಲಾಯಿತು.
ಈಗಲೂ ಅರಣ್ಯಗಳಲ್ಲಿ ಗಿಡಗಳನ್ನು ಬೆಳೆಸುವ ಕಾರ್ಯ ಗಂಭೀರವಾಗಿ ತೆಗೆದುಕೊಳ್ಳದ ಅರಣ್ಯ ಇಲಾಖೆ ತಮಗೆ ಲಾಭವಾಗಬಲ್ಲಂತಹ ವಾಣಿಜ್ಯ ಉದ್ದೇಶದ ಮರಗಳನ್ನು ಬೆಳೆಸುತ್ತಿದೆಯೇ ಹೊರತು ಕಾಡಾನೆ, ಜಿಂಕೆಗಳAತಹ ವನ್ಯ ಪ್ರಾಣಿಗಳಿಗೆ ಬೇಕಾದಂತಹ ಗಿಡ, ಮರಗಳನ್ನು ಬೆಳೆಸುತ್ತಿಲ್ಲ.
ಕಾಡಾನೆಗಳನ್ನು ಓಡಿಸಲು ಕಾಡೇ ಇಲ್ಲ
ಹಿಂದೆ ಕಾಡಾನೆಗಳು ನಾಡಿಗೆ ಲಗ್ಗೆ ಇಟ್ಟಾಗ ಕಾಡಂಚಿನ ಜನ ಅವುಗಳನ್ನು ಕಾಡಿನತ್ತ ಮರಳಿಸುತ್ತಿದ್ದರು. ಆದರೆ ಇಂದು ಕಾಡಾನೆಗಳನ್ನು ಕಾಡಿ ಗೋಡಿಸಲು ಕಾಡೇ ಇಲ್ಲ.
ಇರುವ ಒಂದಷ್ಟು ಕಾಡಿನೊಳಗೆ ನೀಲಗಿರಿ ಹಾಗೂ ತೇಗದಂತಹ ಬಂಜರು ಕಾಡು ಇದೇ ಹೊರತು ಕಾಡಾನೆಗಳಿಗೆ ಅತ್ಯಂತ ಹೆಚ್ಚು ಪ್ರಿಯವಾದ ಹಲಸು, ಬಿದಿರು, ಮಾವು, ಆಲ, ಅತ್ತಿ ಮೊದಲಾದ ಮರಗಳಂತೂ ಇಲ್ಲವೇ ಇಲ್ಲ.
ಕಾಡಂಚಿನ ರೈತಾಪಿ ವರ್ಗ ಬೆಳೆದ ರಾಗಿ, ಭತ್ತ, ಕ್ಯಾನೆ, ಗೆಣಸು ಹಾಗೂ ತೋಟದಲ್ಲಿ ಬೆಳೆಗಾರರು ಬೆಳೆಸಿರುವ ತೆಂಗು, ಅಡಿಕೆ, ಬಾಳೆ, ಹಲಸು ಮೊದಲಾದ ಬೆಳೆಗಳನ್ನು ತಿಂದು ನೆಲಕ್ಕುರುಳಿಸಿ ಅರೆ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ಕುಡಿಯುವ ನೀರು ಅರಸಿ ನದಿಗಳತ್ತ...
ಇನ್ನೂ ಕಾಡಾನೆಗಳು ತಮ್ಮ ದಾಹ ನಿವಾರಿಸಲು ಅರಣ್ಯಗಳ ಒಳಗೆ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದ ಕಾರಣ ಕಾವೇರಿ ನದಿ ಹಾಗೂ ಹಾರಂಗಿ ನದಿಯತ್ತ ತೋಟದೊಳಗಿನ ಕೆರೆ, ತೊರೆಗಳತ್ತ ಮುಖ ಮಾಡುತ್ತಿವೆ.
ಹುದುಗೂರು, ಬೆಂಡೇ ಬೆಟ್ಟ, ಹಾರಂಗಿ, ಯಡವನಾಡು ಅರಣ್ಯ ಪ್ರದೇಶದಲ್ಲಿನ ಕಾಡಾನೆಗಳು ಅಲ್ಲಿಗೆ ಸಮೀಪದ ಹಾರಂಗಿ ಜಲಾಶಯಕ್ಕೆ ಲಗ್ಗೆ ಇಟ್ಟರೆ, ಸೀಗೆ ಹೊಸೂರು, ಭುವನಗಿರಿ, ಜೇನು ಕಲ್ಲು ಬೆಟ್ಟ ಅರಣ್ಯ ವ್ಯಾಪ್ತಿಯ ಕಾಡಾನೆಗಳು ಕಣಿವೆ ಬಳಿಯ ಕಾವೇರಿ ನದಿಗೆ ಲಗ್ಗೆ ಇಡುತ್ತಿವೆ. ದಕ್ಷಿಣ ಕೊಡಗಿನಲ್ಲಿ ಲಕ್ಷö್ಮಣತೀರ್ಥ ನದಿ, ಕೆರೆ, ತೊರೆಗಳತ್ತ ಧಾವಿಸುತ್ತಿವೆ.
ಕಳೆದ ತಿಂಗಳು ಗೊಂದಿ ಬಸವನಹಳ್ಳಿ ಹಾಗೂ ಅತ್ತೂರು ಅರಣ್ಯ ಭಾಗದಲ್ಲಿನ ಕಾಡಾನೆಯೊಂದು ಕುಶಾಲನಗರ ಪಟ್ಟಣದ ಸೆರಗಿನ ಮಾದಾಪಟ್ಟಣದ ಕೆಎಂಟಿ ವಿದ್ಯಾಸಂಸ್ಥೆಯ ಒಳಗೆ ನುಗ್ಗಿ ಸುದ್ದಿಯಾಗಿತ್ತು.
ಕಳೆದ ವಾರ ಕಣಿವೆಯ ಭಾರದ್ವಾಜ ಆನಂದತೀರ್ಥ ಅವರ ತೋಟಕ್ಕೆ ನುಗ್ಗಿದ ನಾಲ್ಕು ಕಾಡಾನೆಗಳ ಹಿಂಡು ಕಣಿವೆಯ ಕಾವೇರಿ ನದಿಯೊಳಗೆ ಬಂದು ರಾಮಲಿಂಗೇಶ್ವರ ದೈವ ಸನ್ನಿಧಿಗೂ ಧಾವಿಸಿತ್ತು.
ಅಷ್ಟೇ ಅಲ್ಲ ಕಳೆದ ಕೆಲ ದಿನಗಳ ಹಿಂದೆ ಕೂಡಿಗೆಯ ಸೈನಿಕ ಶಾಲೆಯ ಬಳಿಯ ಹಾರಂಗಿ ನದಿಯೊಳಗೆ ಹಿಂಡು ಹಿಂಡು ಕಾಡಾನೆಗಳು ಕಂಡುಬAದವು.
ಈ ಸಂಗತಿಗಳನ್ನು ನೋಡುತ್ತಿದ್ದರೆ ‘ನಾವಿರುವ ಜಾಗವನ್ನು ಅತಿಕ್ರಮಿಸಿ ಆಕ್ರಮಿಸಿ ಮನೆಗಳನ್ನು ಕಟ್ಟಿಕೊಂಡಿರುವ ನಿಮ್ಮನ್ನು ನಾವು ಸುಮ್ಮನಿರಲು ಬಿಡಲಾರೆವು’ ಎಂಬ ಸಂದೇಶವನ್ನು ಮಾನವರಿಗೆ ಕಾಡಾನೆಗಳು ಕೊಡುತ್ತಿಲ್ಲವೇ ....? ಎಂದು ಅನಿಸದೇ ಇರದು.
ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ
ಕಾಡಾನೆಗಳ ರೋದನವನ್ನು ಕೇಳಿಸಿಕೊಂಡು ಕಾಡಾನೆಗಳಿಗೆಂದೇ ಒಂದಷ್ಟು ಅರಣ್ಯ ಪ್ರದೇಶವನ್ನು ಕೆಲವು ವರ್ಷಗಳ ಕಾಲ ಮೀಸಲಿಟ್ಟು ಅದರೊಳಗೆ ನಾಡಿನ ಜಾನುವಾರುಗಳು ಕೂಡ ನುಸುಳದಂತೆ ಎಚ್ಚರ ವಹಿಸಿ ಕಾಡಾನೆಗಳಿಗೆ ಬೇಕಾದಂತಹ ಗಿಡ, ಬಳ್ಳಿಗಳನ್ನು ಬೆಳೆಸುವ ಜೊತೆಗೆ ಕೆರೆಗಳನ್ನು ನಿರ್ಮಿಸಿ ನಂತರ ಕಾಡಾನೆಗಳಿಗೆ ಮೀಸಲಿಟ್ಟರೆ ಅನುಕೂಲವಾದೀತೇ....? ಇಲಾಖೆ ಚಿಂತಿಸಬೇಕಾಗುತ್ತದೆ.
ಆನೆ ಕಂದಕದ ಹೆಸರಲ್ಲಿ ಅಪವ್ಯಯ
ಪ್ರತೀ ವರ್ಷವೂ ಕಾಡಾನೆಗಳ ಹಾವಳಿ ತಡೆಯ ನೆಪದಲ್ಲಿ ಆನೆ ಕಂದಕಗಳನ್ನು ತೆರೆಯಲು ಖರ್ಚು ಮಾಡುವ ಕೋಟ್ಯಂತರ ರೂಗಳನ್ನು ಅರಣ್ಯದಂಚಿನ ಕೃಷಿಕರಿಗೆ ನೇರವಾಗಿ ಹಂಚಿದರೆ ಆ ರೈತ ಮಂದಿಯ ಬದುಕೂ ಕೂಡ ಒಂದಷ್ಟು ಹಸನಾಗುತ್ತದೆ.
ಕಾಡಾನೆಗಳ ಹಾವಳಿಯಿಂದ ಬೆಳೆಗಳನ್ನು ನಾಶ ಮಾಡಿಕೊಂಡಿರುವ ರೈತರಿಗೆ ಸಿಗುತ್ತಿರುವ ಪರಿಹಾರ ಏನೇನಕ್ಕೂ ಸಾಲದಾಗಿದೆ. ಆನೆಗಳ ಹತೋಟಿಗೆಂದು ಆನೆ ಕಂದಕ ತೆರೆದಿರುವ ಕಡೆಗಳಲ್ಲಿಯೇ ರೈತರು ಬೆಳೆದಿರುವ ಬೆಳೆಗಳನ್ನು ಕಾಡಾನೆಗಳು ತಿಂದು ನಾಶ ಮಾಡಿರುವುದು ಹೆಚ್ಚು.
ಹಾಗಾಗಿ ಇದೂವರೆಗೂ ಇಲಾಖೆ ರೂಪಿಸಿರುವ ಯೋಜನೆ ಗಳು ಹಾಗೂ ಯೋಚನೆಗಳು ಹೀಗೂ ಮಾರ್ಪಾಡು ಮಾಡ ಬಹುದೇ ಎಂಬುದನ್ನು ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಅರಿಯಬೇಕಿದೆ. ಈ ಮೂಲಕ ಇದೂವರೆಗೂ ಇದ್ದ "ವನ್ಯ ಪ್ರಾಣಿಗಳನ್ನು ರಕ್ಷಿಸಿ" ಎಂಬ ಕರೆಯ ಬದಲು "ವನ್ಯ ಪ್ರಾಣಿಗಳ ತಡೆವ ಹೆಸರಲ್ಲಿ ಅರಣ್ಯ ಇಲಾಖೆ ರೂಪಿಸುತ್ತಿರುವ ಯೋಜನೆಗಳನ್ನು ನಿಲ್ಲಿಸಿ... ಹಾಗೂ ಕೃಷಿಕರ ಬೆಳೆ ರಕ್ಷಿಸಿ" ಎಂದು ಮಾಡಿಕೊಂಡರೇ ಹೇಗೇ..?
- ಕೆ.ಎಸ್. ಮೂರ್ತಿ