ಕೂಡಿಗೆ, ಜ. ೧೮: ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಮುಖ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯ ಅಡಿಯಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯ ಆರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ರೂ. ೯ ಕೋಟಿ ವೆಚ್ಚದ ಕಾಮಗಾರಿಗೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಭೂಮಿಪೂಜೆ ನೆರವೇರಿಸಿದರು.

ಕುಶಾಲನಗರ ಹೋಬಳಿ ವ್ಯಾಪ್ತಿಯ ಗುಡ್ಡೆಹೊಸೂರು, ಕೂಡುಮಂಗಳೂರು, ಮುಳ್ಳುಸೋಗೆ, ಕೂಡಿಗೆ, ತೊರೆನೂರು, ಹೆಬ್ಬಾಲೆ, ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೃಹತ್ ಟ್ಯಾಂಕ್‌ಗಳು ನಿರ್ಮಾಣ ಕಾರ್ಯವನ್ನು ಮಾಡಲು ಆಯಾ ಗ್ರಾಮ ಪಂಚಾಯಿತಿ ನಿಗದಿ ಮಾಡಿದ್ದ ಸ್ಥಳಗಳಲ್ಲಿ ಭೂಮಿ ಪೂಜೆ ನಡೆಯಿತು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶುದ್ಧ ಕುಡಿಯುವ ನೀರು ಪೂರೈಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಯೋಜನೆ ಆಗಿದೆ. ದೇಶವ್ಯಾಪಿ ಜಲಜೀವನ ಯೋಜನೆಗೆ ಚಾಲನೆ ದೊರೆತಿದ್ದು, ಸೋಮವಾರಪೇಟೆ ತಾಲೂಕಿನಲ್ಲಿ ರೂ. ೫೯ ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ಈಗಾಗಲೇ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ೧೪ನೇ ಹಣಕಾಸು ಯೋಜನೆ ಯಡಿಯಲ್ಲಿ ರೂ. ೪೦ ಲಕ್ಷದಿಂದ ೯೦ ಲಕ್ಷದ ತನಕ ಅನುದಾನ ಬಿಡುಗಡೆಯಾಗಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ೧೫ನೇ ಹಣಕಾಸು ಯೋಜನೆಯ ಮೂಲಕ ರೂ. ೧.೫೦ ಕೋಟಿ ಅನುದಾನ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತಾನಾಡಿ, ಕೇಂದ್ರದ ಶೇ. ೬೦ ಮತ್ತು ರಾಜ್ಯ ಸರ್ಕಾರದ ಶೇ. ೪೦ ಭಾಗದ ಹಣದಲ್ಲಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಂಡು ಆರೋಗ್ಯ ಜೀವನ ನಡೆಸುವಂತೆ ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯೆ ಮಂಜುಳಾ ಶ್ರೀನಿವಾಸ್, ತಾ.ಪಂ ಸದಸ್ಯರುಗಳಾದ ಗಣೇಶ್, ಸಬಿತ, ಚನ್ನಕೇಶವ, ಜಯಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ ರೈ ಸೇರಿದಂತೆ ಆಯಾ ಗ್ರಾಮ ಪಂಚಾಯಿತಿ ನೂತನ ಸದಸ್ಯರು, ತಾಲೂಕು ಕುಡಿಯುವ ನೀರಿನ ಯೋಜನೆ ಇಂಜಿನಿಯರ್ ವೀರೇಂದ್ರ ಸೇರಿದಂತೆ ಇನ್ನಿತರರು ಇದ್ದರು.