ಪೆರಾಜೆ, ಜ. ೧೭: ಭಾರತೀಯ ಜನತಾ ಪಾರ್ಟಿ ಗ್ರಾಮ ಸಮಿತಿ ಪೆರಾಜೆ ಇದರ ಮಾಸಿಕ ಸಭೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಪಂಚಾಯಿತಿ ಸಭಾಂಗಣದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಉಪಸ್ಥಿತರಿದ್ದ ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಪೆರಾಜೆ ಗ್ರಾ.ಪಂ.ನಲ್ಲಿ ಕಳೆದ ೨೭ ವರ್ಷಗಳಿಂದ ಭಾ.ಜ.ಪ. ಗ್ರಾಮ ಪಂಚಾಯಿತಿ ಬೆಂಬಲಿತ ಆಡಳಿತದಲ್ಲಿ ಗ್ರಾಮಸ್ಥರು ಸ್ವಾಭಿಮಾನದಿಂದ ಬದುಕುವಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ವಸತಿ, ಶೌಚಾಲಯ, ಶಾಲೆಗಳ ಮೂಲಭೂತ ಸೌಕರ್ಯ, ಉತ್ತಮ ಆರೋಗ್ಯಕ್ಕೆ ಎಲ್ಲಾ ರೀತಿಯ ಸ್ಪಂದನೆಯನ್ನು ನೀಡಿ, ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ಈ ಹಿನ್ನೆಲೆ ೧೦ ರಲ್ಲಿ ೭ ಸೀಟ್ ಪಡೆದು ಸತತ ೬ನೇ ಬಾರಿಯೂ ಗ್ರಾ.ಪಂ. ನಮ್ಮ ತೆಕ್ಕೆಯಲ್ಲಿ ಉಳಿಯುವಂತೆ ಕಾರ್ಯಕರ್ತರು ಮತ್ತು ಮತದಾರರು ಸಹಕಾರ ನೀಡಿದ್ದಾರೆ ಎಂದರು.

ಮುAಬರುವ ತಾ.ಪಂ., ಜಿ.ಪಂ. ಚುನಾವಣೆಗಳು ಯಾವುದೇ ಗೊಂದಲಗಳಿಲ್ಲದೆ ಪಕ್ಷದ ಚಿಹ್ನೆಯ ಅಡಿಯಲ್ಲಿ ಚುನಾವಣೆ ನಡೆಯುತ್ತದೆ, ಇದರಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಪಡಬೇಕೆಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಮಾತನಾಡಿ, ಪೆರಾಜೆ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ಪಕ್ಷ ಸಂಘಟನೆಯ ವಿಷಯದಲ್ಲಿ ಇಡೀ ಜಿಲ್ಲೆಗೆ ಮಾದರಿಯಾಗಿದೆ, ಇಂತಹ ವ್ಯಾಪ್ತಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದೇನೆ ಎಂಬುದು ನನಗೆ ಹೆಮ್ಮೆಯ ಸಂಗತಿ. ಮುಂಬರುವ ಚುನಾವಣೆಗಳಲ್ಲಿ ವಿಪಕ್ಷಗಳ ಯಾವುದೇ ಮಾತುಗಳಿಗೆ ಕಿವಿಕೊಡದೆ ಪಕ್ಷ ಸಂಘಟನೆಯೇ ನಮ್ಮ ಗುರಿಯಾಗಿರಬೇಕೆಂದು ತಿಳಿಸಿದರು.

ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಮಟ್ಟದ ಫಲಿತಾಂಶ ಬಂದಿರುತ್ತದೆ. ನಮ್ಮ ನಿರೀಕ್ಷೆಗಿಂತ ಕೆಲವು ಸ್ಥಾನಗಳು ಕಡಿಮೆಯಾದರು ಮತ್ತೆ ಪೂರ್ಣ ಬಹುಮತದೊಂದಿಗೆ ಬಿಜೆಪಿಗೆ ಪಂಚಾಯಿತಿಯಲ್ಲಿ ಆಡಳಿತ ನಡೆಸುವ ಅವಕಾಶವನ್ನು ಮತದಾರರು ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಮಡಿಕೇರಿ ಭಾ.ಜಾ.ಪ. ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಪ್ರಮೀಳಾ ಭಾರದ್ವಾಜ್ ಬಂಗಾರಕೋಡಿ, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳು, ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರುಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ಭಾ.ಜ.ಪ. ಪದಾಧಿಕಾರಿ ಧನಂಜಯ ಕೋಡಿ ಸ್ವಾಗತಿಸಿ. ಮಡಿಕೇರಿ ತಾ.ಗ್ರಾ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮೂಲೆಮಜಲು ವಂದಿಸಿದರು.