ಸೋಮವಾರಪೇಟೆ, ಜ. ೧೭: ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ಹಾಗೂ ೬೨ನೇ ಮಹಾ ರಥೋತ್ಸವ ಹಿನ್ನೆಲೆ ಸಮೀಪದ ಕೂತಿ ಗ್ರಾಮದ ಸಬ್ಬಮ್ಮ ದೇವರ ಚಾವಡಿ ಕಟ್ಟೆ(ಸುಗ್ಗಿ)ಯಲ್ಲಿ ವಿಶೇಷ ಪೂಜೆ ನಡೆಯಿತು.

ಪೂರ್ವಜರ ಪದ್ಧತಿಯಂತೆ ದೇವರ ಕಟ್ಟೆಯಲ್ಲಿ ಗ್ರಾಮದ ಒಕ್ಕಲಿಗ ಮನೆತನದ ಎಣಿಗೆ (ದೇವರ ಪಟ್ಟ, ಕಲಶ, ಹಣ್ಣು ಕಾಯಿ) ತಂದಿಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ನಂತರ ದೇವರ ಕಟ್ಟೆಯ ಸುತ್ತ ಎಣಿಗೆ ಹೊತ್ತ ಮಹಿಳೆಯರು ಹಾಗೂ ಸ್ಥಳೀಯ ಗ್ರಾಮಸ್ಥರು ಪ್ರದಕ್ಷಿಣೆ ಹಾಕಿ ಸಮೀಪದ ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲಾಯಿತು. ಮಕರ ಸಂಕ್ರಾAತಿಯ ಅಂಗವಾಗಿ ಸಮೀಪದ ಪುಷ್ಪಗಿರಿ ಬೆಟ್ಟದಲ್ಲಿ ಮಕರ ಜ್ಯೋತಿ ಬೆಳಗಲಾಯಿತು. ಪುಷ್ಪಗಿರಿ ಬೆಟ್ಟದ ಮೇಲಿನ ದೇವಾಲಯಕ್ಕೆ ಸಾಂಪ್ರದಾಯಿಕ ಉಡುಗೆ ಧರಿಸಿ ದೇವರ ಒಡೆಕಾರರು ಹಾಗೂ ಕೂತಿ, ತೋಳೂರುಶೆಟ್ಟಳ್ಳಿ, ಬೀದಳ್ಳಿ, ತಲ್ತಾರೆ ಶೆಟ್ಟಲ್ಲಿ, ಕುಮಾರಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬೆಟ್ಟಕ್ಕೆ ತೆರಳಿ, ಬೆಟ್ಟದಲ್ಲಿರುವ ಕೂತಿನಾಡು ಶ್ರೀ ಸಬ್ಬಮ್ಮ ದೇವಿ, ಶ್ರೀ ಶಾಂತಮಲ್ಲಿಕಾರ್ಜುನ ಹಾಗೂ ಕುಮಾರಳ್ಳಿ ಸಬ್ಬಮ್ಮ ದೇವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ೧೨ ಮೊಳದ ಪಂಚೆಯ ದೀಪದ ಬತ್ತಿ ಮಾಡಿ, ೨೫ ಲೀಟರ್ ಎಣ್ಣೆ ಹಾಕಿ ಕಂಬದ ಮೇಲಿರುವ ಬೃಹದಾಕಾರದ ದೀಪದ ಕಂಬದಲ್ಲಿ ರಾತ್ರಿವೇಳೆ ಜ್ಯೋತಿ ಬೆಳಗಲಾಯಿತು. ಇಂದು ಬೆಳಿಗ್ಗೆ ಬೆಟ್ಟದಿಂದಿಳಿದು ಶ್ರೀ ಶಾಂತಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕುಮಾರಳ್ಳಿಯ ಗ್ರಾಮಸ್ಥರೊಡನೆ ತೆರಳಿ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ನೆರವೇರಿಸಲಾಯಿತು.