ಮಡಿಕೇರಿ, ಜ. ೧೬ : ದಿನೇ ದಿನೇ ಏರುತ್ತಿರುವ ಉತ್ಪಾದನಾ ವೆಚ್ಚ, ಕಾಫಿ, ಕಾಳು ಮೆಣಸಿನ ಬೆಲೆ ಕುಸಿತ ಮತ್ತು ಪ್ರಾಕೃತಿಕ ವಿಕೋಪಗಳ ಕಾರಣದಿಂದ ದೇಶದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರ ಒತ್ತಾಯದ ನಡುವೆಯೂ ವಾಣಿಜ್ಯ ಬೆಳೆಯಾದ ಕಾಫಿಗೆ ಈವರೆಗೂ ಕೇಂದ್ರ ಅಥವಾ ರಾಜ್ಯ ಸರ್ಕಾರವು ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿಲ್ಲ. ಆದರೆ ನಮ್ಮ ನೆರೆಯ ಕೇರಳ ರಾಜ್ಯವು ಕಾಫಿಗೆ ಬೆಂಬಲ ಬೆಲೆಯನ್ನು ಘೋಷಿಸಿ ಬೆಳೆಗಾರರ ಮನ ಗೆದ್ದಿದೆ. ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಶುಕ್ರವಾರ ತಮ್ಮ ಬಜೆಟ್ ಭಾಷಣದಲ್ಲಿ ಒಂದು ಕೆಜಿ ರೋಬಸ್ಟಾ ಚೆರಿ ಕಾಫಿಗೆ ಕನಿಷ್ಟ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ೯೦ ರೂಪಾಯಿಗೆ ಹೆಚ್ಚಿಸಿದ್ದಾರೆ. ಪ್ರಮುಖ ರೋಬಸ್ಟಾ ಕಾಫಿ ಬೆಳೆಯುವ ಪ್ರದೇಶವಾದ ವಯನಾಡ್ ಜಿಲ್ಲೆಯ ಕಾಫಿ ಕೃಷಿಕರಿಗೆ ಬೆಂಬಲ ನೀಡುವ ಬಜೆಟ್ ಮುಖ್ಯಾಂಶಗಳನ್ನು ಕಾಫಿ ಬೆಳೆಗಾರ ಸಂಘಟನೆಗಳು ಸ್ವಾಗತಿಸಿವೆ. ಕಾಫಿಗೆ ಬೆಲೆ ಕಡಿಮೆ ಆಗಿದ್ದು ಉತ್ಪಾದನಾ ವೆಚ್ಚ ಏರಿಕೆ ಆಗಿ ಜಿಲ್ಲೆಯ ಕಾಫಿ ಬೆಳೆಗಾರರು ತೀವ್ರ ಬಿಕ್ಕಟ್ಟಿನಲ್ಲಿರುವ ಈ ಸಮಯದಲ್ಲಿ, ನಾವು ಈ ಘೋಷಣೆಯನ್ನು ಸ್ವಾಗತಿಸುತ್ತೇವೆ ಎಂದು ವಯನಾಡ್ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಶಾಂತ್ ರಾಜೇಶ್ ಹೇಳಿದ್ದಾರೆ.ವಯನಾಡಿನಲ್ಲಿ ಶುಕ್ರವಾರ ರೊಬಸ್ಟಾ ಚೆರಿ ಬೆಲೆ ಕೆಜಿಗೆ ೬೪ ರೂ. ಆಗಿದ್ದು, ಕಳೆದ ವರ್ಷ ಕೆಜಿಗೆ ಇದೇ ಅವಧಿಯಲ್ಲಿ ೭೨ ರೂಪಾಯಿ ಗಳಷ್ಟಿತ್ತು. ಎಂ.ಎಸ್. ಸ್ವಾಮಿನಾಥನ್ ಆಯೋಗ ಕೂಡ ಎಂಎಸ್‌ಪಿಯನ್ನು ಶಿಫಾರಸು ಮಾಡಿರಲಿಲ್ಲ ಎಂದ ರಾಜೇಶ್ ಆವರು ವಯನಾಡ್ ಜಿಲ್ಲೆಯು ವರ್ಷಕ್ಕೆ ೯೦,೦೦೦ ಟನ್‌ಗಿಂತಲೂ ಹೆಚ್ಚು ರೋಬಸ್ಟಾ ಚೆರಿ ಉತ್ಪಾದಿಸುತ್ತಿದೆ ಎಂದು ಹೇಳಿದರು, ಇದೇ ಅಲ್ಲದೆ ಕೇರಳ ಸರ್ಕಾರವು ಬ್ರಹ್ಮಗಿರಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ಬೆಳೆಗಾರರಿಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲಿದೆ. ವಯನಾಡ್ ಕಾಫಿ ಬ್ರಾಂಡ್ ಹೆಸರಿನಲ್ಲಿ ಮೌಲ್ಯವರ್ಧಿತ ಕಾಫಿ ಉತ್ಪನ್ನಗಳನ್ನು ಮಾರಾಟ ಮಾಡಲು ಕುಡುಂಬಶ್ರೀ ಘಟಕಗಳ ಅಡಿಯಲ್ಲಿ ನೂರು ಕಿಯೋಸ್ಕ್ ಗಳನ್ನು ಮತ್ತು ೫೦೦ ಕಾಫಿ

(ಮೊದಲ ಪುಟದಿಂದ) ವೆಂಡಿAಗ್ ಮೆಷಿನ್‌ಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದ್ದು, ವಯನಾಡಿನಲ್ಲಿ ಕಾಫಿ ಪಾರ್ಕ್ ಕೂಡ ಸ್ಥಾಪಿಸಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಮಾಜಿ ಸದಸ್ಯ ಡಾ. ಸಣ್ಣುವಂಡ ಕಾವೇರಪ್ಪ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ. ಕಾಫಿಯಿಂದ ಸರ್ಕಾರಗಳು ಕೋಟಿಗಟ್ಟಲೆ ರೂಪಾಯಿ ತೆರಿಗೆ ಸಂಗ್ರಹ ಮಾಡುತ್ತಿವೆ. ಆದರೆ ಬೆಳೆಗಾರರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದು ದೂರಿದರು. ಇಂದು ದೇಶದಲ್ಲಿ ಎಲ್ಲ ಬೆಳೆಗಳಿಗೂ ವಿಮೆ ಸೌಲಭ್ಯ ಇದೆ. ಆದರೆ ಕಾಫಿಗೆ ಅಲ್ಪ ಸಮಯ ಬೆಳೆ ವಿಮೆ ಸೌಲಭ್ಯ ನೀಡಿ ನಂತರ ನಿಲ್ಲಿಸಲಾಗಿದೆ ಎಂದ ಅವರು ಸರ್ಕಾರ ಕಮಾಡಿಟಿ ಬೋರ್ಡ್ ಸ್ಥಾಪಿಸಿ ಬೆಳೆಗಾರರ ನೆರವಿಗೆ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.

ಕೇರಳದಲ್ಲಿ ಮುಂದಿನ ಮೇ ತಿಂಗಳಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಸರ್ಕಾರ ಎಂಎಸ್‌ಪಿ ಘೋಷಿಸಿದೆ ಎನ್ನಲಾಗಿದ್ದು ಎಂಎಸ್‌ಪಿ ಅಡಿಯಲ್ಲಿ ಬೆಳೆಗಾರನ ಪೂರ್ಣ ಉತ್ಪನ್ನವನ್ನೂ ಖರೀದಿಸುವುದಿಲ್ಲ ಬದಲಿಗೆ ಪ್ರತಿಯೊಬ್ಬ ಬೆಳೆಗಾರನಿಂದಲೂ ಸೀಮಿತ ಪ್ರಮಾಣದ ಕಾಫಿ ಖರೀದಿಸಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ.

- ಕೋವರ್‌ಕೊಲ್ಲಿ ಇಂದ್ರೇಶ್