ಮಡಿಕೇರಿ, ಜ. ೧೩: ಕತ್ತಲೆಕಾಡು ಚಾಂಪಿಯನ್ಸ್ ಲೀಗ್ ಪ್ರಥಮ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರೈಸಿಂಗ್ ಸ್ಟಾರ್ಸ್ ಸ್ಯಾಂಡಲ್‌ಕಾಡು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕತ್ತಲೆಕಾಡುವಿನ ಮಾದೇಟಿರ ರಾಜ ಅವರ ‘ತಲಾಟ್' ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಲೋಸರ್ಸ್ ಕತ್ತಲೆಕಾಡು ತಂಡವನ್ನು ರೈಸಿಂಗ್ ಸ್ಟಾರ್ಸ್ ತಂಡ ೯ ವಿಕೆಟ್‌ನಿಂದ ಮಣಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಲೋಸರ್ಸ್ ತಂಡ ೪ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೫೩ ರನ್ ಗಳಿಸಿತು. ರೈಸಿಂಗ್ ಸ್ಟಾರ್ಸ್ ತಂಡ ೪.೩ ಓವರ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ಬೆನ್ನತ್ತಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಡಗದಾಳು ಸೂಪರ್ ಕಿಂಗ್ಸ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.ಚಾAಪಿಯನ್ ತಂಡಕ್ಕೆ ರೂ. ೪೪,೪೪೪, ರನ್ನರಪ್ ತಂಡಕ್ಕೆ ರೂ. ೨೨,೨೨೨ ನಗದು, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ. ೧೧,೧೧೧ ನಗದು ಹಾಗೂ ಚೆಕ್ ಅನ್ನು ಅತಿಥಿಗಳು ವಿತರಿಸಿದರು. ಟೀಂ ಲೋಸರ್ಸ್ ತಂಡದ ಪೃಥ್ವಿ (ಅತ್ಯುತ್ತಮ ಬ್ಯಾಟ್ಸ್ಮೆನ್, ಅತ್ಯುತ್ತಮ ವಿಕೆಟ್ ಕೀಪರ್), ತ್ಯಾಗರಾಜ್ (ಅತ್ಯುತ್ತಮ ಕ್ಷೇತ್ರ ರಕ್ಷಕ), ಶಿವು (ಪಂದ್ಯ ಪುರುಷೋತ್ತಮ), ರೈಸಿಂಗ್ ಸ್ಟಾರ್ಸ್ ತಂಡದ ಕಿರಣ್ (ಅತ್ಯುತ್ತಮ ಬೌಲರ್, ಅತ್ಯುತ್ತಮ ಆಟಗಾರ), ಟೀಂ ಜಾಗ್ವರ್ಸ್ ತಂಡದ ರಾಮಚಂದ್ರ (ಉದಯೋನ್ಮುಖ ಆಟಗಾರ) ಪ್ರಶಸ್ತಿ ಪಡೆದರು.

ಸÀನ್ಮಾನ: ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಸೈನಿಕ ನಾರಾಯಣ, ಚೆಸ್ಕ್ ಹಿರಿಯ ಲೈನ್‌ಮೆನ್ ಗಿರೀಶ್, ಗುತ್ತಿಗೆದಾರ ಬಿ.ಡಿ. ನಾರಾಯಣ ರೈ, ಕೆಸಿಎಲ್ ಸಮಿತಿಯ ಮುಸ್ತಫಾ, ಕೀರ್ತನ್ ಪೂಜಾರಿ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ಕೆಸಿಎಲ್ ಸಮಿತಿ ಅಧ್ಯಕ್ಷ ಬಿ.ಎನ್. ರಾಜೇಶ್ ರೈ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಡಿಕೇರಿ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್, ಕಡಗದಾಳು ಗ್ರಾ.ಪಂ. ಮಾಜಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ, ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಬೆಳೆಗಾರ ಮಾದೇಟಿರ ರಾಜ, ಗುತ್ತಿಗೆದಾರರಾದ ಸತೀಶ್ ರೈ, ಕಿರಣ್ ಪೂಜಾರಿ, ಪ್ರಮುಖರಾದ ಬಿ.ಟಿ. ಜಯಣ್ಣ, ಉಮೇಶ್ ರೈ, ಲೋಕೇಶ್ ರೈ, ಹಮೀದ್, ವಿವೇಕ್ ಹಾಗೂ ಇತರರಿದ್ದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.