ಸಿದ್ದಾಪುರ, ಜ. ೧೩: ೧೯೭೫ ರಲ್ಲಿ ಪ್ರಾರಂಭವಾದ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧೀನದಲ್ಲಿರುವ ಎಸ್.ಎಂ.ಓ. ಅನಾಥಾಶ್ರಮ ಜಿಲ್ಲೆಯ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಿ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಿದ್ದು, ಹಲವು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ ಎಂದು ಸಿದ್ದಾಪುರ ಜುಮಾ ಮಸೀದಿಯ ಖತೀಬ್ ನೌಫಲ್ ಹುದವಿ ಹೇಳಿದ್ದಾರೆ.

ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ ೪೪ನೇ ವಾರ್ಷಿಕ ಸಮ್ಮೇಳನ ಹಾಗೂ ಹಳೆ ವಿದ್ಯಾರ್ಥಿಗಳ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಾವು ಕಲಿತ ವಿದ್ಯೆಯನ್ನು ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಪ್ರತಿಭಾನ್ವಿತರಾಗಿ ಮಾಡಬೇಕಾದ ಕರ್ತವ್ಯ ಪೋಷಕರಲ್ಲಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ.

ಎಸ್‌ಎಂಓ ಅನಾಥಾಲಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕಾಗಿದೆ ಎಂದರು.

ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಇಬ್ರಾಹಿಂ ಗೋಣಿಕೊಪ್ಪ ಮಾತನಾಡಿ, ಸಿದ್ದಾಪುರ ಎಸ್‌ಎಂಒ ಅನಾಥಾಶ್ರಮದಲ್ಲಿ ಕಲಿತ ಅದೆಷ್ಟೋ ಮಂದಿ ಉನ್ನತ ಸ್ಥಾನದೊಂದಿಗೆ ಉದ್ಯೋಗದಲ್ಲಿದ್ದಾರೆ. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದಿರುವ ಶಿಕ್ಷಕರ ಶ್ರಮ ಅಪಾರವಾದದ್ದು ಎಂದರು.

ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು.ಎಂ ಮುಸ್ತಫಾ ಹಾಜಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮ್ಮರ್, ಸಿದ್ದಾಪುರ ಮುಸ್ಲಿಂ ಜಮಾಅತ್ ಕಮಿಟಿಯ ಪ್ರಮುಖರಾದ ರವೂಫ್ ಹಾಜಿ, ಕರೀಮ್, ಮೊಹಮ್ಮದ್ ಅಲಿ, ಸಮೀರ್, ಮುನವ್ವಿರುಲ್ ಇಸ್ಲಾಂ ಮದ್ರಸ ಮುಖ್ಯ ಅಧ್ಯಾಪಕ ಆರಿಫ್ ಪೈಝಿ, ಸಂಘದ ಪ್ರಮುಖರಾದ ಹಸೈನಾರ್ ಉಸ್ತಾದ್, ಬಶೀರ್ ಮದನಿ ಉಸ್ತಾದ್, ಮೊಯಿದೀನ್ ಉಸ್ತಾದ್, ಮೊಹಮ್ಮದ್ ಉಸ್ತಾದ್, ಸಮೀರ್, ನಸೀರ್, ಹನೀಫಾ, ಸಿದ್ದೀಕ್, ನೌಶಾದ್, ಸಲ್ಮಾನ್ ಸೇರಿದಂತೆ ಮತ್ತಿತರರು ಇದ್ದರು.