ಸೋಮವಾರಪೇಟೆ,ಜ.೧೩: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವಕ್ಕೆ ಇಂದು ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ತಾ. ೧೬ರಂದು ೬೨ನೇ ಮಹಾರಥೋತ್ಸವ ನಡೆಯಲಿದೆ.
ಬೆಳ್ಳಿ ಬಂಗಾರದ ದಿನವಾದ ಬುಧವಾರ ಸಂಜೆ ಗ್ರಾಮದ ಪ್ರಮುಖರು, ಧರ್ಮದರ್ಶಿ ಮಂಡಳಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರಿಂದ ಜಾತ್ರಾ ಪ್ರಾರಂಭ ಪೂಜೆ, ಪ್ರಾರ್ಥನೆ ನೆರವೇರುವ ಮೂಲಕ ಪ್ರಸಕ್ತ ಸಾಲಿನ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ತಾ. ೧೪ ರಂದು (ಇಂದು) ಮಕರ ಸಂಕ್ರಮಣ ಕರುವಿನ ಹಬ್ಬದಂದು ಸಂಜೆ ೭ ಗಂಟೆಗೆ ಗರುಡಗಂಭದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪ ಬೆಳಗಿಸುವದು, ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ ನಡೆಯಲಿದೆ. ತಾ. ೧೫ರಂದು ಪೂರ್ವಾಹ್ನ ೧೧ ರಿಂದ ಅರಸು ಬಲ ಸೇವೆ, ಸಂಜೆ ೭.೩೦ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಜರುಗಲಿದೆ.
ತಾ. ೧೬ರಂದು ಪೂರ್ವಾಹ್ನ ೧೧ ಗಂಟೆಗೆ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ೬೨ನೇ ಮಹಾ ರಥೋತ್ಸವ ಜರುಗಲಿದೆ. ರಾತ್ರಿ ೭ ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ವೇದಮೂರ್ತಿ ಶಿಬರೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಲಿವೆ. ತಾ. ೧೭ರಂದು ಮಹಾ ಸಂಪ್ರೋಕ್ಷಣೆ, ವಿವಿಧ ಅರ್ಚನೆ, ಪಂಚಾಮೃತಾ ಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ, ಮಂಗಳ ಪ್ರಾರ್ಥನೆ ನಡೆಯಲಿದೆ. ಇದರೊಂದಿಗೆ ಗ್ರಾಮೀಣ ಪ್ರದೇಶದ ರೈತರು ತಾವು ಬೆಳೆದ ಉತ್ತಮವಾದ ತರಕಾರಿ ಸೇರಿದಂತೆ ಇತರೆ ಬೆಳೆಗಳು, ಜೇನು, ಕಸೂತಿ ವಸ್ತುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಉತ್ತಮ ವಸ್ತುಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಇಂದು ಸಂಜೆ ೭ ಗಂಟೆಗೆ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾರ್ಯದರ್ಶಿ ಸುಂದರ್ ಸೇರಿದಂತೆ ಗ್ರಾಮದ ಪ್ರಮುಖರು, ಸಮಿತಿಯ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿ, ಜಾತ್ರೋತ್ಸವಕ್ಕೆ ಚಾಲನೆ ನೀಡಿದರು.