ಮಡಿಕೇರಿ, ಜ. ೧೩: ಮೂರ್ನಾಡು ಪದವಿ ಕಾಲೇಜಿನ ಆವರಣದಲ್ಲಿ ಪೋಷಕರು ಹಾಗೂ ಶಿಕ್ಷಕರ ಸಭೆಯನ್ನು ತಾ. ೭ ರಂದು ನೆರವೇರಿಸ ಲಾಯಿತು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಮಾತನಾಡಿ, ಪೋಷಕರಿಗೆ ಕಾಲೇಜಿನ ಪ್ರಸ್ತುತ ಸ್ಥಿತಿಯ ಬಗ್ಗೆ ತಿಳಿಸಿದರು. ಮಕ್ಕಳ ಏಳಿಗೆಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದ ಮತ್ತೊಬ್ಬ ಅತಿಥಿಯಾದ ಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ಅಪ್ಪಣ್ಣ ಮಾತನಾಡಿ, ಮಾರಕ ರೋಗದ ಸಂಕಷ್ಟದ ಸ್ಥಿತಿಯಲ್ಲೂ ವಿದ್ಯಾರ್ಥಿಗಳ ದೃಷ್ಟಿಯಿಂದ ಕಾಲೇಜು ಪ್ರಾರಂಭಿಸಲಾಗಿದೆ. ಪೋಷಕರು ಸಹ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಪೋಷಕರಾದ ಮುಲ್ಲೇರ ನವೀನ್ ನಂಜಪ್ಪ, ಪ್ರಭಾಕರ್ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ಕಾಲೇಜಿನ ಮುಂದಿನ ನಡೆಯ ಬಗ್ಗೆ ತಿಳಿಸಿದರಲ್ಲದೆ, ಇಡೀ ಪ್ರಪಂಚವೇ ಮಾರಕ ರೋಗದ ಹೊಡತಕ್ಕೆ ಸಿಲುಕಿರುವಾಗ ಪ್ರತಿ ಒಬ್ಬರು ಕೂಡ ಮಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದು ಅಗತ್ಯವೆಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ಕಿಗ್ಗಾಲು ಹರೀಶ್ ಮಾಡಿದರೆ, ಉಪನ್ಯಾಸಕಿ ಕಲ್ಪನಾ ಸಾಮ್ರಾಟ್ ಸ್ವಾಗತಿಸಿದರು.