ಕುಶಾಲನಗರ, ಜ. ೧೩: ಕೊಡಗು-ಮೈಸೂರು ಗಡಿಭಾಗ ಕುಶಾಲನಗರ ಬಳಿ ಅರಣ್ಯ ತಪಾಸಣಾ ಕೇಂದ್ರದಲ್ಲಿ ಅಳವಡಿಸಿರುವ ಗೇಟ್ ಕೇವಲ ನಾಮಕಾವಸ್ಥೆಗೆ ಇರುವಂತಿದೆ. ಕಳೆದ ಎರಡು ದಶಕಗಳ ಹಿಂದೆ ಕಾವೇರಿ ಸೇತುವೆ ಬಳಿ ಅರಣ್ಯ ಇಲಾಖೆ ಬಳಿ ನಿರ್ಮಿಸಿರುವ ಈ ಬೃಹತ್ ಗೇಟ್ ವರ್ಷದ ಇಡೀ ದಿನಗಳಲ್ಲಿ ತೆರೆದಿರುತ್ತದೆ. ಕಾರಣ ಈ ಗೇಟ್ ಅನ್ನು ಬಳಕೆ ಮಾಡಲು ಅಸಾಧ್ಯವಾದ ಸ್ಥಿತಿ ನಿರ್ಮಾಣ ವಾಗಿದೆ. ಗೇಟ್ ಅನ್ನು ಎಳೆದು ಹಾಕಿದರೆ ಮತ್ತೆ ಅದನ್ನು ತೆರೆಯಲು ಸಿಬ್ಬಂದಿಗಳು ಹರಸಾಹಸ ಪಡಬೇಕಾಗುತ್ತದೆ. ಅವೈಜ್ಞಾನಿಕವಾಗಿ ಬೃಹತ್ ಗಾತ್ರದ ಗೇಟ್ ನಿರ್ಮಾಣಗೊಂಡಿದ್ದು ಕಳೆದ ೨೦ ವರ್ಷಗಳಿಂದ ಕೇವಲ ಬೆರಳೆಣಿಕೆ ದಿನಗಳು ಮಾತ್ರ ಇದರ ಬಳಕೆಯಾಗಿದೆ ಎಂದರೆ ತಪ್ಪಾಗಲಾರದು. ಅದು ಕೂಡ ಕೊಡಗು ಅಥವಾ ರಾಜ್ಯ ಬಂದ್ ಕರೆ ಸಂದರ್ಭ ಮಾತ್ರ...!

ಮೈಸೂರು ಕುಶಾಲನಗರ ರಸ್ತೆ ಅಭಿವೃದ್ಧಿ ಸಂದರ್ಭ ಸಮೀಪದಲ್ಲಿದ್ದ ಹಳೆಯ ಗೇಟ್ ತೆರವುಗೊಂಡ ಸಂದರ್ಭ ಈ ಬೃಹತ್ ಗಾತ್ರದ ಗೇಟ್ ಅನ್ನು ಅರಣ್ಯ ಇಲಾಖೆ ನಿರ್ಮಿಸಿದ್ದು ಇದರಿಂದ ಇಲಾಖೆಯ ಉದ್ದೇಶ ಮಾತ್ರ ಈಡೇರುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಜಿಲ್ಲೆಯ ಅರಣ್ಯ ಭಾಗದಿಂದ ಅಕ್ರಮವಾಗಿ ಮರ ಸಾಗಾಟ, ಅರಣ್ಯ ಉತ್ಪನ್ನಗಳ ಸಾಗಾಟ ಮತ್ತಿತರ ಪರಿಶೀಲನೆಗೆ ಈ ತಪಾಸಣಾ ಕೇಂದ್ರವನ್ನು ಅರಣ್ಯ ಇಲಾಖೆ ನಿಯೋಜಿಸಿದ್ದು ಇಲ್ಲಿ ಅರಣ್ಯ ಸಿಬ್ಬಂದಿಗಳು ದಿನದ ೨೪ ಗಂಟೆ ಕಾಲ ಕರ್ತವ್ಯದಲ್ಲಿರುತ್ತಾರೆ. ಆದರೆ ಗೇಟ್‌ನ ದುಸ್ಥಿತಿ ಮನಗಂಡ ಮರಗಳ್ಳರು ಮಾತ್ರ ಇದರ ಲಾಭ ಪಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೀಟೆ ಮರ ಕಳ್ಳ ಸಾಗಾಣಿಕೆ ಒಂದು ಉದಾಹರಣೆ ಯಾಗಿದೆ. ಇತ್ತೀಚಿನ ದಿನಗಳಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಐಷಾರಾಮಿ ಕಾರ್‌ಗಳಲ್ಲಿ ಅಕ್ರಮವಾಗಿ ಬೀಟೆ ಮರ ಸಾಗಿಸುವ ದಂಧೆ ಹೆಚ್ಚಳವಾಗಿದೆ.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ವಾಘಾ ಬಾರ್ಡರ್ ಎಂದೇ ಹೆಸರುವಾಸಿಯಾದ ಕೊಪ್ಪ ಗೇಟ್‌ನ ಬಗ್ಗೆ ಈ ಮೂಲಕ ಹಾದು ಹೋಗುವ ದಾಖಲೆ ರಹಿತ ವಾಹನ ಸವಾರರಿಗೆ ಮಾತ್ರ ಈ ಕೇಂದ್ರ ಒಂದು ರೀತಿ ದುಸ್ವಪ್ನವಾಗಿ ಕಾಡುವಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಕುಶಾಲನಗರ - ಮೈಸೂರು ವ್ಯಾಪ್ತಿಯ ರಸ್ತೆಯಲ್ಲಿ ವಾಹನ ಸಂಚಾರದ ಒತ್ತಡ ಅಧಿಕವಾಗಿರುವ ಕಾರಣ ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸುವುದು ಕಷ್ಟಕರವಾಗಿದೆ ಎನ್ನುವುದು ಈ ಗೇಟ್ ಸಿಬ್ಬಂದಿಗಳ ಅಳಲಾಗಿದೆ. ಇನ್ನೊಂದೆಡೆ ರಾತ್ರಿ ವೇಳೆ ಕಳ್ಳ ಸಾಗಾಣಿಕೆ ಸಂದರ್ಭ ಕಳ್ಳರನ್ನು ಎದುರಿಸಲು ಬೇಕಾದ ಆಯುಧಗಳ ಕೊರತೆ ಕೂಡ ಈ ಗೇಟ್‌ನಲ್ಲಿ ಎದ್ದು ಕಾಣುತ್ತಿದೆ. ಸಿಸಿ ಕ್ಯಾಮೆರಾ ಹೊರತುಪಡಿಸಿದರೆ ಇನ್ಯಾವುದೇ ಭದ್ರತಾ ವ್ಯವಸ್ಥೆಯನ್ನು ಇಲ್ಲಿನ ಸಿಬ್ಬಂದಿಗಳಿಗೆ ಒದಗಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಸೋಲಾರ್ ವ್ಯವಸ್ಥೆ ಕಲ್ಪಿಸುವುದರೊಂದಿಗೆ ನಿರಂತರ ವಿದ್ಯುತ್ ಸೌಲಭ್ಯ ಕೂಡ ಇಲ್ಲಿ ಕಲ್ಪಿಸಬೇಕಾಗಿದೆ. ಈ ತಪಾಸಣಾ ಕೇಂದ್ರದ ಮೂಲಕ ಕಳ್ಳ ಸಾಗಾಣಿಕೆದಾರರು ನುಸುಳುವಲ್ಲಿ ಯಶಸ್ವಿಯಾದಲ್ಲಿ ಮುಂದೆ ರಾಜ್ಯದ ಯಾವುದೇ ಕಡೆ ಹೆದ್ದಾರಿಯಲ್ಲಿ ತಪಾಸಣಾ ಕೇಂದ್ರಗಳು ಇಲ್ಲದಿರು ವುದು ಕಳ್ಳಸಾಗಾಣಿಕೆ ದಾರರಿಗೆ ಒಂದು ರೀತಿಯ ವರದಾನವಾಗಿದೆ. ಈ ಹಿನೆÀ್ನಲೆಯಲ್ಲಿ ಕೊಪ್ಪ ಗೇಟ್ ಮಾತ್ರ ಭಾರೀ ಪ್ರಾಮುಖ್ಯತೆಯನ್ನು ಹೊಂದಿದ್ದು, ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಅರಣ್ಯ ತಪಾಸಣಾ ಗೇಟ್‌ನ ಸಮರ್ಪಕ ನಿರ್ವಹಣೆ ಮತ್ತು ಸಿಬ್ಬಂದಿಗಳ ಭದ್ರತೆ ಬಗ್ಗೆ ತಕ್ಷಣ ಚಿಂತನೆ ಹರಿಸಬೇಕಾಗಿದೆ ಎನ್ನವುದು ಈ ಭಾಗದ ಜನರ ಆಗ್ರಹವಾಗಿದೆ.

-ಚಂದ್ರಮೋಹನ್