ಸೋಮವಾರಪೇಟೆ, ಜ. ೧೨: ಕಳೆದ ೨ ದಶಕದಿಂದ ಸುಣ್ಣ ಬಣ್ಣ ಕಾಣದೇ ಶಿಥಿಲಾವಸ್ಥೆಗೆ ತಲುಪುತ್ತಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡದ ನವೀಕರಣ ಕಾಮಗಾರಿ ಪ್ರಾರಂಭಗೊAಡಿದೆ.
ಸರ್ಕಾರದಿಂದ ರೂ. ೧.೪೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಳೆದ ತಾ. ೨ರಂದು ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಪ್ರಾರಂಭಗೊAಡಿದ್ದು, ಕಟ್ಟಡದ ಮುಂಭಾಗ ಹಾಗೂ ಎಡಭಾಗದ ಗೋಡೆಗಳ ಪ್ಲಾಸ್ಟರಿಂಗ್ನ್ನು ತೆಗೆದು ನೂತನವಾಗಿ ಪ್ಲಾಸ್ಟರಿಂಗ್ ಮಾಡುವದು, ಕಿಟಕಿಗಳ ದುರಸ್ತಿ, ಸುಣ್ಣ ಬಣ್ಣ ಬಳಿಯುವದು, ಕಟ್ಟಡದ ಮೇಲ್ಭಾಗದಲ್ಲಿ ಸಭಾಂಗಣ ಹಾಗೂ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಕಳೆದೆರಡು ದಶಕಗಳಿಂದಲೂ ತಾಲೂಕು ಕಚೇರಿಯ ದುರಸ್ತಿಗೆ ಅನುದಾನ ಕೊರತೆಯ ಗ್ರಹಣ ಹಿಡಿದಿತ್ತು. ಮಳೆಗಾಲದಲ್ಲಿ ಕಟ್ಟಡ ಸೋರುತ್ತಿದ್ದುದರಿಂದ ಕಡತ, ಕಂಪ್ಯೂಟರ್ಗಳ ರಕ್ಷಣೆಯೊಂದಿಗೆ ಸಿಬ್ಬಂದಿಗಳು ಕಚೇರಿಯೊಳಗೆ ಕೆಲಸ ಮಾಡಲು ಸಮಸ್ಯೆಯಾಗಿತ್ತು. ಇದರೊಂದಿಗೆ ಸಾರ್ವಜನಿಕರೂ ಸಹ ಕಚೇರಿಯೊಳಗೆ ಓಡಾಡಲು ಅನಾನುಕೂಲವಾಗಿತ್ತು.
ಇದೀಗ ಮಳೆಹಾನಿ ಪರಿಹಾರ ನಿಧಿಯಡಿ ರೂ. ೧.೪೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮಂಡ್ಯದ ಗುತ್ತಿಗೆದಾರರು ಟೆಂಡರ್ ಪಡೆದಿದ್ದಾರೆ. ಬಿಹಾರ ಮೂಲಕ ಕಾರ್ಮಿಕರು ಕಟ್ಟಡ ನವೀಕರಣ ಕಾರ್ಯದಲ್ಲಿ ತೊಡಗಿದ್ದಾರೆ.