ಮಡಿಕೇರಿ, ಜ. ೧೨: ಮಡಿಕೇರಿ ನಗರದಲ್ಲಿ ಭಾರತೀಯ ಸೇನೆಯ ಮಹಾನ್ ಅಧಿಕಾರಿಗಳಾದ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಪ್ರತಿಮೆಗಳಿವೆ. ಇದರೊಂದಿಗೆ ನಗರಸಭಾ ಕಚೇರಿ ಬಳಿಯ ವೃತ್ತದಲ್ಲೂ ಒಂದು ಪ್ರತಿಮೆ ಇದ್ದು, ಇದು ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳೊಂದಿಗೆ ನೇರವಾಗಿ ಮುಖಾಮುಖಿ ಹೋರಾಟ ನಡೆಸಿ ೨೦೦೦ನೇ ಇಸವಿಯ ಜನವರಿ ೧೨ರಂದು ದೇಶರಕ್ಷಣೆಗಾಗಿ ಹುತಾತ್ಮರಾದ ವೀರ ಸೇನಾನಿ ಮೇಜರ್ ಮಂದೇರಿರ ಮುತ್ತಣ್ಣ ಅವರದ್ದು. ಜ. ೧೨ರ ದಿನ ನಡೆದ ಕಾರ್ಯಾಚರಣೆಯಲ್ಲಿ ಇವರು ತೋರಿರುವ ಸಾಹಸ ರೋಮಾಂಚಕಾರಿಯಾಗಿದ್ದು, ಅದೆಷ್ಟೋ ಮಂದಿಯ ಹಾಗೂ ಪುಟ್ಟ ಮಕ್ಕಳ ರಕ್ಷಣೆಯೊಂದಿಗೆ ಕೆಲವಾರು ಸೈನಿಕರ ಪ್ರಾಣವನ್ನು ಉಳಿಸಿ ತಾವು ಅಸುನೀಗಿದ್ದರು. ಈ ದಿನ ಅವರು ಹುತಾತ್ಮರಾದ ದಿನವಾಗಿದ್ದು, ಯಾರೂ ಇವರನ್ನು ಸ್ಮರಿಸಿಕೊಳ್ಳದಿರುವುದು ವಿಪರ್ಯಾಸಕರವಾಗಿದೆ. ಮಡಿಕೇರಿಯಲ್ಲಿರುವ ಇವರ ಸಂಬAಧಿಕ ಕುಟುಂಬವೊAದು ಮಾತ್ರ ಬೆಳಿಗ್ಗೆಯೇ ಪ್ರತಿಮೆಗೆ ಹೂಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿ ತಮ್ಮ ಪಾಡಿಗೆ ಮನೆಗೆ ತೆರಳಿದ್ದಾರೆ.

ಮುತ್ತಣ್ಣ ಅವರ ಸಾಹಸಕ್ಕೆ ಕಾಶ್ಮೀರದಲ್ಲಿ ಮೇಜರ್ ಎಂ.ಸಿ. ಮುತ್ತಣ್ಣ ಮಾರ್ಗ್, ಮುತ್ತಣ್ಣ ಆರ್ಮಿ ಪಬ್ಲಿಕ್ ಸ್ಕೂಲ್ ಹಾಗೂ ಅಲ್ಲಿನ ಸಮುದಾಯ ಭವನವೊಂದಕ್ಕೂ ಅವರ ಹೆಸರನ್ನಿಡಲಾಗಿದೆ.

-ಶಶಿ