ವೀರಾಜಪೇಟೆ, ಜ. ೧೨: ಮಡಿಕೇರಿಯಲ್ಲಿ ಶಿಥಿಲಾವಸ್ಥೆಯ ಲ್ಲಿರುವ ಪುರಾತನ ಕೋಟೆ, ಅರಮನೆಯ ಕಟ್ಟಡದಲ್ಲಿ ಇದುವರೆಗೆ ಆಗಿರುವ ಕಾಮಗಾರಿಯನ್ನು ರಿಟ್ ಅರ್ಜಿದಾರರೊಂದಿಗೆ ಖುದ್ದು ವೀಕ್ಷಿಸಿ ತಕ್ಷಣ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸುವಂತೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕ್ ಅವರು ಆದೇಶಿಸಿದ್ದಾರೆ. ಮಡಿಕೇರಿ ಕೋಟೆ ಹಾಗೂ ಅರಮನೆ ಕಟ್ಟಡದ ರಕ್ಷಣೆಯ ನವೀಕರಣದ ಕಾಮಗಾರಿ ವಿಳಂಬ ವಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶ ಓಕ್ ಅವರು, ಕಟ್ಟಡದ ಕಾಮಗಾರಿಯನ್ನು ಯಾವಾಗ ಆರಂಭಿಸಬಹುದು ನಂತರ ಯಾವಾಗ ಮುಕ್ತಾಯಗೊಳಿಸ ಬಹುದು ಎಂಬುದರ ಬಗ್ಗೆ ಪುರಾತತ್ವ ಇಲಾಖೆ ವಿಭಾಗೀಯ ಪೀಠಕ್ಕೆ ಮುಂದಿನ ಹದಿನೈದು ದಿನಗಳೊಳಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿ ವಿಚಾರಣೆಯನ್ನು ಎರಡು ವಾರಗಳ ಮಟ್ಟಿಗೆ ಮುಂದೂಡಿದರು.
ಶಿಥಿಲಾವಸ್ಥೆಯಲ್ಲಿರುವ ಕೋಟೆ ಹಾಗೂ ಅರಮನೆಯ ಕಟ್ಟಡವನ್ನು ನವೀಕರಣಗೊಳಿಸಿ ರಕ್ಷಿಸುವಂತೆ ನಿವೃತ್ತ ಐ.ಎ.ಎಸ್. ಅಧಿಕಾರಿ ಜೆ.ಎಸ್. ವಿರುಪಾಕ್ಷಪ್ಪ ಪರ ವಾದಿಸಿದ ಎನ್. ರವೀಂದ್ರನಾಥ್ ಕಾಮತ್ ಅವರು ನವೀಕರಣಕ್ಕಾಗಿ ಈ ಹಿಂದೆಯೇ ಸರಕಾರ ರೂ. ೧೦ ಕೋಟಿ ಎಪ್ಪತ್ತಾರು ಲಕ್ಷ ಹಣ ಬಿಡುಗಡೆ ಮಾಡಿದೆ. ಪುರಾತತ್ವ ಇಲಾಖೆ ಈಗಾಗಲೇ ರೂ. ೫೯ ಲಕ್ಷ ವೆಚ್ಚದಲ್ಲಿ ಮಾಡಿದ ಕಾಮಗಾರಿ ಕಳಪೆಯಾಗಿದೆ. ಅರಮನೆಯ (ಮೊದಲ ಪುಟದಿಂದ) ಮೇಲೆ ಹೊದಿಸಿದ ತಗಡಿನ ಶೀಟ್ ಕಳಪೆ ಗುಣ ಮಟ್ಟದಿಂದ ಕೂಡಿದ್ದು ಕೆಲವು ಶೀಟ್‌ಗಳು ಜಾರಿ ಹೋಗಿದೆ. ಪುರಾತತ್ವ ಇಲಾಖೆ ಸರಕಾರದ ಅನುದಾನದ ಹಣದಲ್ಲಿ ಶೇ. ೨೨ ರಷ್ಟು ಸೇವಾ ಶುಲ್ಕದ ಬೇಡಿಕೆ ಇಟ್ಟಿತ್ತು. ಇದಾದ ನಂತರ ಕಾಮಗಾರಿಯನ್ನು ಅನಾವಶ್ಯಕವಾಗಿ ವಿಳಂಬ ಮಾಡುತ್ತಿದ್ದು ಇನ್ನು ಮೂರು ತಿಂಗಳ ಅವಧಿಯಲ್ಲಿ ಮುಂಗಾರು ಮಳೆ ಆರಂಭವಾದರೆ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠದ ಮುಂದೆ ವಾದಿಸಿದರು.
ಪುರಾತತ್ವ ಇಲಾಖೆಯ ವಕೀಲರಾದ ಮಧುಕರ್ ದೇಶಪಾಂಡೆ ವಿಭಾಗೀಯ ಪೀಠದ ಮುಂದೆ ವಾದಿಸಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಕಟ್ಟಡದ ನವೀಕರಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಎಲ್ಲ ದಾಖಲೆಗಳು ಸರಿಹೊಂದಿಸಿಕೊAಡು ಸಿದ್ಧತೆ ನಡೆಸುತ್ತಿದ್ದಾರೆ. ಕಾಮಗಾರಿ ಆರಂಭಿಸಲು ಇನ್ನು ವಿಳಂಬ ಮಾಡುವುದಿಲ್ಲ ಎಂದು ವಿಭಾಗೀಯ ಪೀಠದ ಮುಂದೆ ಹೇಳಿದರು.
ಸರಕಾರದ ಪರ ವಕೀಲರಾದ ವಿಜಯ್‌ಕುಮಾರ್ ಪಾಟೀಲ್ ಅವರು ವಾದಿಸಿ, ಸರಕಾರದಿಂದ ಈ ಹಿಂದೆಯೇ ನವೀಕರಣಕ್ಕಾಗಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭಿಸಲು ಸರಕಾರದ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದರು.
ಉಚ್ಚನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ಮುಖ್ಯ ನ್ಯಾಯಾಧೀಶ ಓಕ್ ಅವರೊಂದಿಗೆ ನ್ಯಾಯಾಧೀಶ ಸಚಿನ್ ಮುಗ್ದುಂ ಹಾಜರಿದ್ದರು.