ಸೋಮವಾರಪೇಟೆ, ಜ. ೧೨: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಜಿಲ್ಲೆಗೆ ರೂ. ೫೪೬ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಅದರಲ್ಲಿ ಈಗಾಗಲೇ ರೂ. ೧೦೦ ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಮತ್ತೆ ರೂ. ೧೦೦ ಕೋಟಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲು ಉದ್ದೇಶಿಸ ಲಾಗಿರುವ ಸೋಮವಾರಪೇಟೆ ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಈಗಾಗಲೇ ಪೂರ್ಣ ಗೊಂಡಿರುವ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕಿನ ದೊಡ್ಡಮಳ್ತೆ, ದುಂಡಳ್ಳಿ, ಹಂಡ್ಲಿ, ಬ್ಯಾಡಗೊಟ್ಟ, ಕೊಡ್ಲಿಪೇಟೆ, ಬೆಸೂರು, ನಿಡ್ತ, ಆಲೂರು-ಸಿದ್ದಾಪುರ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. ೧೯.೩೧ ಕೋಟಿ ವೆಚ್ಚದ ವಿವಿಧ ರಸ್ತೆ, ಸೇತುವೆ, ತಡೆಗೋಡೆ, ಚರಂಡಿ, ದೇವಾಲಯ ನಿರ್ಮಾಣ ಕಾಮಗಾರಿ ಗಳಿಗೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು.ಈ ಮಧ್ಯೆ ಕೊಡ್ಲಿಪೇಟೆಯಲ್ಲಿ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೂ ಪ್ರತ್ಯೇಕವಾಗಿ ತಲಾ ೧ ಕೋಟಿ ಅನುದಾನ ಬಿಡುಗಡೆ ಮಾಡಲಾ ಗುವದು. ಇದರೊಂದಿಗೆ ವಿಶೇಷ ಪ್ಯಾಕೇಜ್‌ನ ಅನುದಾನದಲ್ಲೂ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸೇರಿದಂತೆ ಇತರ
(ಮೊದಲ ಪುಟದಿಂದ) ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವದು ಎಂದರು. ಸರ್ಕಾರದಿಂದ ಬಿಡುಗಡೆ ಯಾಗುವ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳು ಎಲ್ಲೂ ಕಳಪೆಯಾಗಬಾರದು. ಗುಣಮಟ್ಟದ ವಿಚಾರದಲ್ಲಿ ಯಾವದೇ ರಾಜಿಯಿಲ್ಲ. ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಅಭಿಯಂತರರು ಕಾಮಗಾರಿ ನಡೆಯುವ ಸಂದರ್ಭ ಸ್ಥಳ ಪರಿಶೀಲನೆ ನಡೆಸಬೇಕು. ಸಾರ್ವಜನಿಕರೂ ಸಹ ಕೆಲಸದ ಬಗ್ಗೆ ಕಾಳಜಿ ವಹಿಸಬೇಕು ಎಂದು ರಂಜನ್ ತಿಳಿಸಿದರು.
ಭೂಮಿಪೂಜೆ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಜಿ.ಪಂ. ಸದಸ್ಯರಾದ ಪುಟ್ಟರಾಜು, ಸರೋಜಮ್ಮ, ಲೋಕೋಪಯೋಗಿ ಇಲಾಖಾ ಅಭಿಯಂತರ ಮೋಹನ್ ಕುಮಾರ್, ಹೇಮಾವತಿ ನೀರಾವರಿ ನಿಗಮದ ಅಭಿಯಂತರರಾದ ಪುನೀತ್, ಪುಟ್ಟಸ್ವಾಮಿ, ಅರುಣ್, ರಶೀದ್ ಸೇರಿದಂತೆ ಸ್ಥಳೀಯ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.