ಮಡಿಕೇರಿ, ಜ. ೧೧: ಮಡಿಕೇರಿಯ ಜಿಲ್ಲಾ ನ್ಯಾಯಾಲಯದಲ್ಲಿ ಹಲವು ದಿನಗಳಿಂದ ಕಲಾಪಗಳಿಗೆ ಆಗಮಿಸುವವರನ್ನು ಕೊರೊನಾ ಸಂಬAಧ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೇ ತಪಾಸಣಾ ಕೇಂದ್ರ ನಿರ್ಮಿಸಲಾಗಿದ್ದು, ನ್ಯಾಯಾಲಯಕ್ಕೆ ಬರುವವರ ಸಾಲಿನ ಉದ್ದ ಕಡಿಮೆಯಾಗುವ ಯಾವುದೇ ಕುರುಹುಗಳೂ ಕಾಣುವಂತಿಲ್ಲ. ಬೆಳಿಗ್ಗೆ ೯:೩೦ ಗೆ ಕಲಾಪಗಳಿಗೆ ಆಗಮಿಸಿದವರು ಸುಮಾರು ೧೦:೩೦ ರವರೆಗೆ ‘ಕೋವಿಡ್’ ಪರೀಕ್ಷೆ ನಡೆಸುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕಾಯಬೇಕು. ಅವರು ಬಂದ ನಂತರ ಸಾಲಿನಲ್ಲಿ ನಿಂತರೆ ಮಧ್ಯಾಹ್ನದವರೆಗೂ ಕಾಯಬೇಕು. ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಗೆ ಕೆಲ ಹಿರಿಯರಿಗೆ ಸಾಲಿನಲ್ಲಿ ನಿಲ್ಲಲು ಆಗದೆ ನೆಲದಲ್ಲೇ ಕುಳಿತಿದ್ದ ದೃಶ್ಯ ಗೋಚರಿಸಿತು. ಗಂಟೆಗಟ್ಟಲೆ ಕಾಯುತ್ತ ಕುಳಿತರೆ ಆರೋಗ್ಯ ಸಮಸ್ಯೆ ಎದುರಾಗುವ ಭಯವನ್ನು ಕೆಲವರು ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದಷ್ಟೆ ಈ ಕುರಿತು ವರದಿ ಮಾಡಲಾಗಿ ಆರೋಗ್ಯ ಇಲಾಖೆಯ ಗಮನಸೆಳೆದರೂ ಹೆಚ್ಚುವರಿ ಸಿಬ್ಬಂದಿಯಾಗಲಿ ಮತ್ತೊಂದು ತಪಾಸಣಾ ಕೇಂದ್ರವನ್ನಾಗಲಿ ಸ್ಥಾಪಿಸಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅರ್ಥವಿಲ್ಲದ ಪರೀಕ್ಷೆಕಲಾಪಗಳಿಗೆ ಆಗಮಿಸುವವರು ಗಂಟೆಗಟ್ಟಲೆ ಕಾದ ನಂತರ ತಮ್ಮ ಕೋವಿಡ್ ಪರೀಕ್ಷೆಯ ಸರದಿ ಬಂದ ನಂತರ ದ್ರವ ಮಾದರಿಯನ್ನು ನೀಡುತ್ತಾರೆ. ಬಳಿಕ ಮತ್ತೊಂದು ಸಾಲನ್ನು ಸೇರಬೇಕಾಗುತ್ತದೆ. ಇಲ್ಲಿ ತಮಗೆ ಪರೀಕ್ಷೆ ಮಾಡಲಾಗಿದೆ ಎಂಬುದಾಗಿ ಚೀಟಿಯೊಂದನ್ನು ನೀಡಲಾಗುತ್ತದೆ. ಇದನ್ನು ಪ್ರವೇಶ ದ್ವಾರದಲ್ಲಿ ತೋರಿಸಿ ನ್ಯಾಯಾಲಯಕ್ಕೆ ಪ್ರವೇಶಿಸಬಹುದಾಗಿದೆ. ದ್ರವ ಮಾದರಿ ಪರೀಕ್ಷೆ ಮಾಡಿದ ಬಳಿಕ ‘ಪಾಸಿಟಿವ್’, ‘ನೆಗೆಟಿವ್’ ವರದಿ ಬರುವ ಮುನ್ನವೇ ನ್ಯಾಯಾಲಯಕ್ಕೆ ಪ್ರವೇಶ ನೀಡಿದರೆ ಪ್ರಯೋಜನವಾದರೂ ಏನು? ಎಂಬುದು ಸಾಲಿನಲ್ಲಿ ನಿಂತವರ ಪ್ರಶ್ನೆ. ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂಬ ಚೀಟಿಯನ್ನು ತೋರಿಸಿದೊಡನೆ

(ಮೊದಲ ಪುಟದಿಂದ) ‘ಕೋವಿಡ್’ ಇದ್ದವರಿಗೆ ‘ನೆಗೆಟಿವ್’ ಆಗಿಬಿಡುತ್ತದೆಯೇ ಎಂಬುದು ಉತ್ತರ ಸಿಗದ ಪ್ರಶ್ನೆ. ಇಷ್ಟೆಲ್ಲಾ ಸರ್ಕಸ್ ಬಳಿಕ ಕೋರ್ಟ್ ಪ್ರವೇಶಿಸಿದರೆ ಸಾಕು ಎಂಬ ಮನೋಭಾವದಿಂದ ಚೀಟಿ ತೋರಿಸಿ ಕೋರ್ಟ್ ಪ್ರವೇಶಿಸಿ ದೊಡನೆ ಅರ್ಧ- ಒಂದು ಗಂಟೆ ತಡವಾಗಿ ಆಗಮಿಸಿದರೆ ಕೆಲವೊಮ್ಮೆ ಕೇಸು ಮುಂದೂಡಲ್ಪಟ್ಟಿರುತ್ತದೆ.!