ಅಪಘಾತದಲ್ಲಿ ಸಾವನ್ನಪ್ಪಿದ ಕೇಂದ್ರ ಸಚಿವರ ಪತ್ನಿ

ಉತ್ತರ ಕನ್ನಡ(ಅಂಕೋಲಾ), ಜ.೧೧ : ಕೇಂದ್ರ ಆಯುಷ್ ಮತ್ತು ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಅವರು ಚಲಿಸುತ್ತಿದ್ದ ಕಾರು ಪಲ್ಟಿಯಾಗಿದ್ದು, ಉತ್ತರ ಕನ್ನಡದ ಹೊಸಕಂಬಿ ಬಳಿ ಘಟನೆ ನಡೆದಿದೆ. ಇದರಲ್ಲಿ ಸಚಿವರ ಪತ್ನಿ ವಿಜಯಾ ನಾಯಕ್, ಹಾಗೂ ಆಪ್ತಸಹಾಯಕ ಸಾವನ್ನಪ್ಪಿದ್ದಾರೆ. ಇನ್ನು ಸಚಿವರ ಸ್ಥಿತಿ ಗಂಭೀರವಾಗಿದೆ. ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯಲ್ಲಾಪುರ ತಾಲೂಕಿನ ಗಂಟೆ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಗೋಕರ್ಣಕ್ಕೆ ತೆರಳುವಾಗ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರಿಗೆ ಗಾಯವಾಗಿದ್ದು, ಸಚಿವರ ಪತ್ನಿ ವಿಜಯಾ ನಾಯಕ್ ಗಂಭೀರವಾಗಿ ಗಾಯಗೊಂಡು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪ್ಪಿದ್ದಾರೆ. ಗಾಯಗೊಂಡವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಸಚಿವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಬಿಜೆಪಿ ಪಕ್ಷದ ಮುಖಂಡರು ದೌಡಾಯಿಸಿದ್ದು, ಈ ಸಂಬAಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊದಲ ಹಂತದಲ್ಲಿ ರಾಜ್ಯದಲ್ಲಿ ೧೬ ಲಕ್ಷ ಕೊರೊನಾ ಯೋಧರಿಗೆ ಲಸಿಕೆ

ಬೆಂಗಳೂರು, ಜ. ೧೧ : ಮೊದಲ ಹಂತದಲ್ಲಿ ರಾಜ್ಯದಲ್ಲಿ ೧೬ ಲಕ್ಷ ಕೊರೊನಾ ಯೋಧರಿಗೆ ಲಸಿಕೆ ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ೨೩೫ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು, ಮೊದಲ ಹಂತದಲ್ಲಿ ತಾ. ೧೬ ರಿಂದ ೧೬ ಲಕ್ಷ ಕೊರೋನಾ ಯೋಧರಿಕೆ ಲಸಿಕೆ ನೀಡಲಾಗುವುದು ಎಂದರು. ಲಸಿಕೆ ಶೇಖರಣೆಗೆ ಕೋಲ್ಡ್ ಸ್ಟೋರೇಜ್, ಹಂಚಿಕೆ, ವಿತರಣೆ, ನೀಡುವಿಕೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲಾ ಹಂತದಲ್ಲೂ ನಿಗಾ ವಹಿಸಲಾಗಿದೆ. ಹಂತ ಹಂತವಾಗಿ ಲಸಿಕೆ ವಿತರಿಸಲಾಗುವುದು, ಜನರು ಅಗತ್ಯ ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಸಂಸತ್ ಭವನ ನಿರ್ಮಾಣಕ್ಕೆ ಪಾರಂಪರಿಕ ಸಂರಕ್ಷಣಾ ಸಮಿತಿ ಅನುಮೋದನೆ

ನವದೆಹಲಿ, ಜ. ೧೧ : ನೂತನ ಸಂಸತ್ ಭವನ ನಿರ್ಮಾಣಕ್ಕೆ ಪಾರಂಪರಿಕ ಸಂರಕ್ಷಣಾ ಸಮಿತಿ ಸೋಮವಾರ ಅನುಮೋದನೆ ನೀಡಿದೆ. ನೂತನ ಸಂಸತ್ ಭವನ ನಿರ್ಮಾಣಕ್ಕೆ ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಪಡೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಹಿನ್ನಲೆಯಲ್ಲಿ ಕೇಂದ್ರ ಸಮಿತಿಯ ಅನುಮತಿ ಕೇಳಿತ್ತು. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪಾರಂಪರಿಕ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಕೇಂದ್ರ ವಸತಿ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರು, ನೂತನ ಸಂಸತ್ ಭವನ ನಿರ್ಮಾಣ ಸಂಬAಧ ಸರ್ಕಾರದ ಪ್ರಸ್ತಾಪದ ಬಗ್ಗೆ ಸಮಿತಿ ಚರ್ಚಿಸಿ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನೂತನ ಸಂಸತ್ ಭವನ ನಿರ್ಮಾಣದ ಸೆಂಟ್ರಲ್ ವಿಸ್ಟಾ ಯೋಜನೆಗೆ ಕೇಂದ್ರ ಸರ್ಕಾರ ನೀಡಿದ್ದ ಅಧಿಸೂಚನೆ ಮತ್ತು ಪರಿಸರ ಇಲಾಖೆಯ ಅನುಮತಿಯನ್ನು ಸುಪ್ರೀಂ ಕೊರ್ಟ್ ಎತ್ತಿ ಹಿಡಿದಿತ್ತು. ೨೦೧೯ರ ಸೆಪ್ಟೆಂಬರ್‌ನಲ್ಲಿ ಘೋಷಿಸಲಾದ ಪರಿಷ್ಕೃತ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಸುಮಾರು ೧,೨೦೦ ಆಸನದ ಸಾಮರ್ಥ್ಯವುಳ್ಳ ತ್ರಿಕೋನಾಕಾರದ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗುತ್ತದೆ. ೨೦೨೨ರ ಆಗಸ್ಟ್ ವೇಳೆಗೆ ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.