ವೀರಾಜಪೇಟೆ, ಜ. ೯: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ನಗರದ ಏಳನೇ ಬ್ಲಾಕ್‌ನ ಮೊಗರಗಲ್ಲಿಯ ಬೃಹತ್ ತಡೆಗೋಡೆ ಬದಿಯ ಸುಮಾರು ೨೧ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವ ಸ್ಥಿತಿ ಸೃಷ್ಟಿಯಾಯಿತು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೀರನ್ನು ತೆಗೆಯಲು ಹರಸಾಹಸ ಪಡುವಂತಾಯಿತು. ಈ ಪ್ರದೇಶ ಕೊಳಚೆ ಅಭಿವೃದ್ಧಿ ಮಂಡಳಿಗೆ ಸೇರಿದ್ದರೂ ಈ ತನಕ ಯಾವುದೇ ಜನಪರ ಅಭಿವೃದ್ಧಿ ಕಾವiಗಾರಿ ನಡೆದಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದರು.

ಮಳೆಯ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ರಾತ್ರಿ ಪೂರ್ತಿ ನಿವಾಸಿಗಳು ರಸ್ತೆಯ ಬದಿಯಲ್ಲಿ ಇರುವಂತಾಯಿತು. ಮನೆಗೆ ನುಗ್ಗಿದ ನೀರು ಹೊರ ತೆಗೆಯಲು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ, ಹಾಗೂ ಹಾಲಿ ಸದಸ್ಯ ಎಸ್.ಎಚ್.ಮತೀನ್ ಕೈ ಜೋಡಿಸಿದರು.

ಇಪ್ಪತ್ತು ತಿಂಗಳ ಹಿಂದೆ ಮೊಗರಗಲ್ಲಿಯ ರಾಜಾ ಕಾಲುವೆಯ ಮೇಲ್ಭಾಗದ ತಡೆಗೋಡೆ ಮಳೆಗೆ ಹಾನಿಯಾಗಿತ್ತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿವಾಸಿಗಳ ಸುರÀಕ್ಷತೆಗಾಗಿ ತಕ್ಷಣ ತಡೆಗೋಡೆ ನಿರ್ಮಾಣ ಮಾಡುವಂತೆ ಸರಕಾರ ದಿಂದ ರೂ ೪೬ ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದರೂ ಕೂಡ ಕಾಮಗಾರಿ ವಿಳಂಬಗೊAಡ ಹಿನ್ನೆಲೆ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರಿದರು. ಗುತ್ತಿಗೆದಾರರು ತಡೆಗೋಡೆಯನ್ನು ನಿರ್ಮಿಸದೆ ಮರಳು ಚೀಲಗಳನ್ನು ಜೋಡಿಸಿದ್ದಾರೆ. ಇದೀಗ ಚೀಲಗಳು ನೆಲ ಕಚ್ಚುವ ಪರಿಸ್ಥಿತಿಯಲ್ಲಿದೆ. ತಾತ್ಕಾಲಿಕ ಪರಿಹಾರ ಕೈಗೊಳ್ಳುವಾಗ ತಡೆಗೋಡೆಯ ಕೆಳಗಿಳಿರುವ ರಾಜಾ ಕಾಲುವೆ ಮಣ್ಣಿನಿಂದ ಮುಚ್ಚಿ ಹೋಗಿದೆ. ಇದರಿಂದ ಮಳೆ ನೀರು ಹರಿಯಲು ಜಾಗವಿಲ್ಲದೆ ನೀರು ಮನೆಯೊಳಗೆ ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದರು.

ಸದಸ್ಯರುಗಳ ಒತ್ತಾಯದಿಂದ ಪಟ್ಟಣ ಪಂಚಾಯಿತಿ ಜೆಸಿಬಿ ಮೂಲಕ ಮುಚ್ಚಿ ಹೋಗಿದ್ದ ರಾಜಾ ಕಾಲುವೆ ಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಿ ದ್ದರಿಂದ ಇಲ್ಲಿನ ನಿವಾಸಿಗಳು ಸದ್ಯಕ್ಕೆ ಆತಂಕದಿAದ ದೂರವಾಗಿದ್ದಾರೆ.

ಸ್ಥಳದಲ್ಲಿದ್ದ ದೇಚಮ್ಮ, ಎಸ್.ಎಚ್.ಮತೀನ್ ಮಾತನಾಡಿ, ತಡೆಗೋಡೆಯ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಮನೆಗೆ ನೀರು ನುಗ್ಗಿದ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದನ ದೊರೆತಿಲ್ಲ. ಒಂದು ವಾರದೊಳಗೆ ಕಾಮಗಾರಿ ಆರಂಭಿಸಿ, ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ನಿವಾಸಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.