ಸೋಮವಾರಪೇಟೆ, ಜ. ೮: ಸೋಮವಾರಪೇಟೆ ತಾಲೂಕು ಕಂದಾಯ ಇಲಾಖೆಯ ಅಧೀನ ಕ್ಕೊಳಪಟ್ಟ ಸರ್ವೆ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕ ಬೇಕೆಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಂಬAಧಿಸಿದ ಅಧಿಕಾರಿಗೆ ಸೂಚನೆ ನೀಡಲಾಯಿತು.ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಯಿತು.ಪೌತಿ ಖಾತೆ ಆಂದೋಲನ ಪ್ರಗತಿಯಲ್ಲಿರುವ ಹಿನ್ನೆಲೆ ಹಲವಷ್ಟು ಮಂದಿ ಬಡ ರೈತರು ತಮ್ಮ ಜಮೀನಿನ ದಾಖಲಾತಿಗಾಗಿ ಅರ್ಜಿ ಸಲ್ಲಿಸುತ್ತಿ ದ್ದಾರೆ. ಜಮೀನಿಗೆ ಕಂದಾಯ ನಿಗದಿ ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಮೂಲಕವೇ ಸರ್ವೆ ಇಲಾಖೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಯಿತು.

ಪೌತಿ ಖಾತೆ ಆಂದೋಲನ ಪ್ರಗತಿಯಲ್ಲಿರುವ ಹಿನ್ನೆಲೆ ಹಲವಷ್ಟು ಮಂದಿ ಬಡ ರೈತರು ತಮ್ಮ ಜಮೀನಿನ ದಾಖಲಾತಿಗಾಗಿ ಅರ್ಜಿ ಸಲ್ಲಿಸುತ್ತಿ ದ್ದಾರೆ. ಜಮೀನಿಗೆ ಕಂದಾಯ ನಿಗದಿ ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಮೂಲಕವೇ ಸರ್ವೆ ಇಲಾಖೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ಇದಕ್ಕೆ ದನಿಗೂಡಿಸಿದ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಸರ್ವೆ ಇಲಾಖೆಯಲ್ಲಿ ಬಡ ರೈತರು ಹಾಗೂ ಜನಸಾಮಾನ್ಯರ ಶೋಷಣೆಯಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸದಿದ್ದರೆ ಇಲಾಖೆಗೆ ಕೆಟ್ಟಹೆಸರು ಬರಲಿದೆ ಎಂದರು.

ಬಡವರು ಹಾಗೂ ರೈತರನ್ನು ಸತಾಯಿಸದೇ ಕೆಲಸ ಮಾಡಿಕೊಡಿ ಎಂದು ಸದಸ್ಯ ಬಿ.ಬಿ. ಸತೀಶ್ ಅವರು, ಇಲಾಖೆಯ ಸೂಪರ್‌ವೈಸರ್ ಬ್ರಹ್ಮೇಶ್ ಅವರಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ (ಮೊದಲ ಪುಟದಿಂದ) ಪಾರದರ್ಶಕವಾಗಿ ಕೆಲಸ ಮಾಡಬೇಕು. ಮಧ್ಯವರ್ತಿಗಳ ಹಾವಳಿ ಕಂಡುಬAದರೆ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವದು ಎಂದು ತಾ.ಪಂ. ಜನಪ್ರತಿನಿಧಿಗಳು ಹಾಗೂ ತಹಶೀಲ್ದಾರ್ ಗೋವಿಂದರಾಜು ಅವರು, ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಸರ್ವೆ ಇಲಾಖೆಯಲ್ಲಿ ಸರ್ವೆಯರ್‌ಗಳ ಸಂಖ್ಯೆ ಕಡಿಮೆ ಇದೆ. ಸೋಮವಾರಪೇಟೆಯಲ್ಲಿ ಒಬ್ಬರೇ ಸರ್ವೆಯರ್ ಇದ್ದು, ಹೆಚ್ಚುವರಿಯಾಗಿ ಮೂವರನ್ನು ನಿಯೋಜಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಸೂಪರ್‌ವೈಸರ್ ಬ್ರಹ್ಮೇಶ್ ಹೇಳಿದರು.

ಒತ್ತುವರಿ ತೆರವು ಮಾಡಿ: ಸೋಮವಾರಪೇಟೆಯೊಂದಿಗೆ ಇದ್ದ ಕುಶಾಲನಗರ ಇದೀಗ ನೂತನ ತಾಲೂಕಾಗಿದ್ದು, ಅಭಿವೃದ್ಧಿ ವಂಚಿತ ಪ್ರದೇಶಗಳು ಸೋಮವಾರಪೇಟೆಯಲ್ಲಿ ಹೆಚ್ಚಿವೆ. ಮುಂದಿನ ದಿನಗಳಲ್ಲಿ ನೂತನ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಿ ಜಾಗದ ಅವಶ್ಯಕತೆಯಿದೆ. ಈ ಹಿನ್ನೆಲೆ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಈಗಿನಿಂದಲೇ ತೆರವು ಗೊಳಿಸುವ ಕಾರ್ಯ ಆಗಬೇಕು. ಪಟ್ಟಣದ ತೋಟಗಾರಿಕೆ, ಪಶು ವೈದ್ಯಕೀಯ ಇಲಾಖೆಯ ಜಾಗಗಳೂ ಒತ್ತುವರಿಯಾಗುತ್ತಿವೆ ಎಂದು ಸದಸ್ಯ ಸತೀಶ್ ಸಭೆಯ ಗಮನಕ್ಕೆ ತಂದರು.

೮೬ ಅರ್ಜಿಗಳು ಸ್ವೀಕಾರ: ಪೌತಿ ಖಾತೆ ಆಂದೋಲನದಡಿ ಈವರೆಗೆ ೮೬ ಅರ್ಜಿಗಳು ಸ್ವೀಕಾರಗೊಂಡಿದ್ದು, ೨೬ ಅರ್ಜಿಗಳು ಸರ್ವೆ ಇಲಾಖೆಯಲ್ಲಿದೆ. ಎಡಿಎಲ್‌ಆರ್ ಬಳಿ ೪೫ ಅರ್ಜಿಗಳಿವೆ. ತಹಸೀಲ್ದಾರ್ ಕಚೇರಿಯಲ್ಲಿ ೨, ಉಪವಿಭಾಗಾಧಿಕಾರಿಗಳ ಬಳಿ ೪ ಅರ್ಜಿಗಳಿದ್ದು, ಮಾರ್ಚ್ ಒಳಗೆ ಎಲ್ಲಾ ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲು ಕ್ರಮ ವಹಿಸಲಾಗುವದು ಎಂದು ತಹಸೀಲ್ದಾರ್ ಗೋವಿಂದ ರಾಜು ತಿಳಿಸಿದರು.

ದೊಡ್ಡಮಳ್ತೆ ಗ್ರಾಮದಲ್ಲಿ ೧.೪೦ ಏಕರೆ ಜಾಗ ಗುರುತಿಸಿದ್ದು, ಇದರಲ್ಲಿ ೧ ಏಕರೆ ಕಸವಿಲೇವಾರಿಗೆ ಹಾಗೂ ೪೦ ಸೆಂಟ್ಸ್ ಜಾಗವನ್ನು ಸ್ಮಶಾನಕ್ಕೆ ಮೀಸಲಿರಿಸಿ ದಾಖಲಾತಿ ನೀಡಲು ಕ್ರಮ ಕೈಗೊಳ್ಳುವಂತೆ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರು ತಾಲೂಕು ತಹಶೀಲ್ದಾರ್ ಗಮನಕ್ಕೆ ತಂದರು.

ಅAತೆಯೇ ಕೊಡ್ಲಿಪೇಟೆಯ ನವಗ್ರಾಮ, ಊರುಗುತ್ತಿಯಲ್ಲೂ ಸರ್ವೆಗೆ ಬಾಕಿ ಇದೆ. ತಕ್ಷಣ ಈ ಬಗ್ಗೆ ಗಮನ ಹರಿಸುವಂತೆ ಅಧ್ಯಕ್ಷೆ ಪುಷ್ಪಾ ರಾಜೇಶ್ ತಿಳಿಸಿದರು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಗಡಿಯನ್ನು ಸರ್ವೆ ಮೂಲಕ ಗುರುತು ಮಾಡಿ, ಪಂಚಾಯಿತಿ ವ್ಯಾಪ್ತಿಗೆ ಸೇರಿಸಬೇಕು. ಪಟ್ಟಣಕ್ಕೆ ಸೇರಿರುವ ಹಲವಷ್ಟು ಸ್ಥಳಗಳು ದಾಖಲೆಯಲ್ಲಿ ನಗರೂರು ಎಂದಾಗಿದೆ. ಇದರಿಂದಾಗಿ ಸಮಸ್ಯೆಯಾಗುತ್ತಿದೆ ಎಂದು ಅಭಿಮನ್ಯುಕುಮಾರ್ ಅವರು, ತಹಶೀಲ್ದಾರ್ ಗಮನಕ್ಕೆ ತಂದರು. ಮುಂದಿನ ಸಾಮಾನ್ಯ ಸಭೆಗೆ ಪ.ಪಂ. ಮುಖ್ಯಾಧಿಕಾರಿಯನ್ನು ಕರೆಸಿ, ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಸಭೆ ತೀರ್ಮಾನಿಸಿತು.

ತಾಲೂಕಿನಲ್ಲಿ ೨೦೧೯-೨೦ರ ಸಾಲಿನಲ್ಲಿ ೧೮೬೭ ಮಂದಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ೯೩೯ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ೮೨ ಅರ್ಜಿಗಳನ್ನು ತಿರಸ್ಕರಿಸಲಾಗಿದೆ, ೮೪೬ ಅರ್ಜಿಗಳು ಬಾಕಿ ಉಳಿದಿವೆ ಎಂದು ಅಧಿಕಾರಿ ವಿನು ಮಾಹಿತಿ ನೀಡಿದರು.

ಸಿಬ್ಬಂದಿಗಳ ನೇಮಕ್ಕೆ ಕ್ರಮ ವಹಿಸಿ: ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬದಾಮಿ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇಲಾಖೆಯ ಮೂಲಕ ಅನುಷ್ಠಾನಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಮಾಹಿತಿ ನೀಡುವ ಸಂದರ್ಭ ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹಾಗೂ ಸದಸ್ಯ ಮಣಿ ಉತ್ತಪ್ಪ, ಕಳೆದ ೨೦ ವರ್ಷಗಳಿಂದಲೂ ಇದನ್ನೇ ಕೇಳುತ್ತಿದ್ದೇವೆ. ಮೊದಲು ಪಶು ವೈದ್ಯಕೀಯ ಇಲಾಖೆಗೆ ಸಂಬAಧಿಸಿದAತೆ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಭರ್ತಿ ಮಾಡಲು ಕ್ರಮವಹಿಸಿ. ಅವರುಗಳೇ ಇಲ್ಲದ ಮೇಲೆ ಯೋಜನೆಗಳ ಅನುಷ್ಠಾನ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಇಲಾಖೆಯಲ್ಲಿ ೯೮ ಹುದ್ದೆಗಳು ಮಂಜೂರಾಗಿದ್ದು ಕೇವಲ ೨೭ ಸಿಬ್ಬಂದಿಗಳಿದ್ದಾರೆ. ಇರುವ ಸಿಬ್ಬಂದಿಗಳೇ ಎಲ್ಲಾ ಕೆಲಸ ನಿರ್ವಹಿಸಬೇಕಿದೆ ಎಂದರು.

ಕುಡಿಯುವ ನೀರಿಗೆ ಸಮಸ್ಯೆ: ಹಂಡ್ಲಿ ಗ್ರಾ.ಪಂ.ಗೆ ಸೇರಿದ ಹುಲುಕೋಡು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ೧೦೦ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ಇದರೊಂದಿಗೆ ಗ್ರಾಮದ ಜಾನುವಾರುಗಳಿಗೂ ಕುಡಿಯಲು ನೀರು ಸಿಗುತ್ತಿಲ್ಲ ಎಂದು ಸದಸ್ಯ ಕುಶಾಲಪ್ಪ ಸಭೆಯ ಗಮನ ಸೆಳೆದರು. ಮುಂದಿನ ೮ ದಿನಗಳ ಒಳಗೆ ಈ ಬಗ್ಗೆ ಕ್ರಮವಹಿಸುವಂತೆ ಅಭಿಯಂತರ ವೀರೇಂದ್ರ ಅವರಿಗೆ ಸಭೆ ಸೂಚಿಸಿತು.

ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ಹಾಸ್ಟೆಲ್‌ಗಳಲ್ಲಿ ೧೦ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭವಾಗಿದೆ ಎಂದು ಸಹಾಯಕ ನಿರ್ದೇಶಕ ಶೇಖರ್ ಹೇಳಿದರು. ತಾ. ೧೭ರಂದು ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಿದ್ದತೆ ನಡೆಸಿದ್ದು, ತಾಲೂಕಿನಲ್ಲಿ ೧೩೧೫೫ ಮಕ್ಕಳನ್ನು ಗುರುತಿಸಲಾಗಿದೆ. ೧೪೮ ಪೊಲೀಯೋ ಬೂತ್, ೨೦೪ ತಂಡ, ೭೭ ಎಎನ್‌ಎಂ, ೧೯೩ ಆಶಾ ಕಾರ್ಯಕರ್ತೆಯರು, ೨೭೮ ಅಂಗನವಾಡಿ ಕಾರ್ಯಕರ್ತೆಯರು ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ತಿಳಿಸಿದರು.

ಹೊಟೇಲ್‌ಗಳ ಅಶುಚಿತ್ವದ ಬಗ್ಗೆ ಆರೋಗ್ಯ ಇಲಾಖೆ ಗಮನ ಹರಿಸಬೇಕು ಎಂದು ಮಣಿ ಉತ್ತಪ್ಪ ಗಮನ ಸೆಳೆದರು. ಇದರೊಂದಿಗೆ ಚೆಟ್ಟಳ್ಳಿ ಸಹಕಾರ ಭವನದ ಬಳಿಯಲ್ಲಿಯೇ ಹಂದಿ ಸಾಕಾಣಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಸ್ಥಳದಲ್ಲಿ ಕುಡಿಯುವ ನೀರಿನ ಘಟಕ, ನ್ಯಾಯಬೆಲೆ ಅಂಗಡಿಯೂ ಇದ್ದು, ಸಾರ್ವಜನಿಕರಿಗೆ ಸಮಸ್ಯೆ ಯಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಪಶುವೈದ್ಯಕೀಯ ಇಲಾಖೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಯಲ್ಲಿ ಸಮಯ ಪರಿಪಾಲನೆಯಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಮರ್ಪಕವಾಗಿ ಕೆಲಸ ಮಾಡದ ಹಿನ್ನೆಲೆ ವಿದ್ಯಾರ್ಥಿಗಳು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯೆ ತಂಗಮ್ಮ ಆರೋಪಿಸಿದರು.

ಮೊಕದ್ದಮೆಗೆ ಕ್ರಮ: ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿಯಲ್ಲಿ ಆಗಿರುವ ಅವ್ಯವಹಾರದ ಬಗೆಗಿನ ತನಿಖೆ ಯಾವ ಹಂತದಲ್ಲಿದೆ? ಇದರಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳೂ ಶಾಮೀಲಾಗಿದ್ದು, ಅವರುಗಳ ವಿರುದ್ಧವೂ ತನಿಖೆ ನಡೆಸಬೇಕು ಎಂದು ಮಣಿ ಉತ್ತಪ್ಪ ಆಗ್ರಹಿಸಿದರು. ಈ ಬಗ್ಗೆ ಆಡಿಟ್ ವರದಿ ಬಂದ ನಂತರ ತನಿಖೆ ನಡೆಸಲಾಗುವದು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ದಾಖಲಿಸಲಾಗುವದು ಎಂದು ಇಲಾಖೆಯ ಅಧಿಕಾರಿ ಮೋಹನ್ ಹೇಳಿದರು.

ತಾಲೂಕಿನಾದ್ಯಂತ ೨ನೇ ಹಂತದ ವಿದ್ಯಾಗಮ ಪ್ರಾರಂಭವಾಗಿದ್ದು, ೯ ರಿಂದ ೧೦ನೇ ತರಗತಿವರೆಗೆ ೬ ಸಾವಿರ ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸುತ್ತಿದ್ದಾರೆ ಎಂದು ಬಿಇಓ ಪಾಂಡು ತಿಳಿಸಿದರು. ಕೃಷಿ ಇಲಾಖೆಯಿಂದ ಟಾರ್ಪಲ್‌ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆಗೆ ನೂತನ ವಾಹನ ಆಗಮಿಸಿದ್ದು, ರೈತರು ತಮ್ಮ ಸಮಸ್ಯೆಗಳನ್ನು ೧೫೫೧ಗೆ ತಿಳಿಸಿದರೆ, ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆ ಹರಿಸಲಾಗುವದು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ಸಭೆಗೆ ತಿಳಿಸಿದರು.

ಮೀನುಗಾರಿಕೆ ಇಲಾಖೆಯ ಎಲ್ಲಾ ಯೋಜನೆಗಳಿಗೂ ಫಲಾನುಭವಿಗಳನ್ನು ನೀವೇ ಆಯ್ಕೆ ಮಾಡುತ್ತಿದ್ದೀರಿ. ಇಲಾಖೆಯ ಯೋಜನೆಗಳ ಬಗ್ಗೆ ಯಾರಿಗೂ ಮಾಹಿತಿ ನೀಡುತ್ತಿಲ್ಲ. ಇದು ಮುಂದುವರೆದರೆ ಕ್ರಮಕ್ಕೆ ಶಿಫಾರಸು ಮಾಡಲಾಗುವದು ಎಂದು ಇಲಾಖೆಯ ಅಧಿಕಾರಿ ಮಂಜುನಾಥ್ ಅವರಿಗೆ ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.

ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯದೊಳಗೆ ಕೆರೆಗಳ ನಿರ್ಮಾಣ, ಬಿದಿರು ನೆಡುವ ಕಾರ್ಯವನ್ನು ಇಲಾಖೆ ನಡೆಸುತ್ತಿದೆ ಎಂದು ಅರಣ್ಯಾಧಿಕಾರಿಗಳು ಸಭೆಗೆ ತಿಳಿಸಿದರು. ಮೊದಲು ಅರಣ್ಯದಲ್ಲಿರುವ ತೇಗದ ಮರಗಳನ್ನು ತೆಗೆದು ವನ್ಯಪ್ರಾಣಿ ಹಾಗೂ ಪರಿಸರಕ್ಕೆ ಪೂರಕವಾಗಿ ಅರಣ್ಯಗಳನ್ನು ಬೆಳೆಸಿದರೆ ವನ್ಯಪ್ರಾಣಿಗಳ ಹಾವಳಿ ತಹಬದಿಗೆ ಬರುತ್ತದೆ ಎಂದು ಸದಸ್ಯ ಮಣಿ ಉತ್ತಪ್ಪ ಸಲಹೆ ನೀಡಿದರು.

೨೦೧೯-೨೦ರ ಸಾಲಿನ ಮಳೆಹಾನಿ ಪರಿಹಾರ ಯೋಜನೆಯಡಿ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ ಎಂದು ಅಭಿಮನ್ಯುಕುಮಾರ್ ಆರೋಪಿಸಿದರು. ಟೆಂಡರ್ ಆಗಿದ್ದರೂ ಹಣ ಬಿಡುಗಡೆಯಾಗಿರಲಿಲ್ಲ. ಇದೀಗ ೧೦ ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ಮಾರ್ಚ್ ಒಳಗೆ ಕಾಮಗಾರಿ ಮುಕ್ತಾಯ ಗೊಳಿಸಲಾಗುವದು ಎಂದು ಅಭಿಯಂತರ ವೀರೇಂದ್ರ ತಿಳಿಸಿದರು.

ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಚಂಗಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಹಾಗೂ ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.