ಮಡಿಕೇರಿ, ಜ. ೭: ಕೊಡವ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ, ಬೆಳೆಸಿಕೊಂಡು, ರಕ್ತದಲ್ಲಿಯೇ ಕರಗತ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಕೊಡವ ಭಾಷಿಕ ಜನಾಂಗದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಸೇರಿ ಹೋರಾಟ ಮಾಡ ಬೇಕಾದ ಅನಿವಾರ್ಯತೆ ಯಿದೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಅಭಿಪ್ರಾಯಪಟ್ಟರು.
ಇಲ್ಲಿನ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆದ ಕೊಡಗು ಮಲೆಯ ಸಮಾಜದ ೨ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು; ಇಂದು ಕೊಡವ ಸಂಸ್ಕೃತಿ, ಸಂಪ್ರದಾಯ ಅಳಿಯದೆ ಉಳಿದಿದೆಯೆಂದರೆ ಅದಕ್ಕೆ ಭಾಷಿಕ ಜನಾಂಗದ ಕೊಡುಗೆ ಅಪಾರವಾದುದು. ಇಂತಹ ಸಂಸ್ಕೃತಿಯ ಆರಾಧಕ ಜನಾಂಗದವರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರಕಾರದ ಗಮನ ಸೆಳೆಯಲು ಎಲ್ಲ ೧೮ ಭಾಷಿಕ ಸಮುದಾಯದವರು ಒಂದಾಗಿ ಹೋರಾಡುವಂತಾಗಬೇಕೆAದರು. ಭಾಷಿಕ ಜನಾಂಗ ಆಲದ ಮರವಿದ್ದಂತೆ, ಒಂದು ರೆಂಬೆ ಅಳಿದರೂ ಕೊಡವ ಭಾಷೆ, ಸಂಸ್ಕೃತಿ ಉಳಿಯುವುದು ಕಷ್ಟ, ಇದನ್ನರಿತು ಪ್ರಜಾಪ್ರತಿನಿಧಿಗಳು, ಸರಕಾರ ಸಮಸ್ಯೆಗೆ ಸ್ಪಂದಿಸಿ ಪರಿಹರಿಸುವಂತಾಗಬೇಕೆAದು ಹೇಳಿದರು.
ಕೊಡಗು ಮಲೆಯ ಸಮಾಜದ ಅಧ್ಯಕ್ಷ ಮಲೆಯಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜನಾಂಗದ ಹಿರಿಯ ಸದಸ್ಯೆ ಮಲೆಯಡ ಬೊಳ್ಳಮ್ಮ ಉದ್ಘಾಟಿಸಿದರು. ಸಮಾಜದ ಕಾರ್ಯದರ್ಶಿ ಮೇವಾಟಿರ ಸಾಬು ಮುತ್ತಣ್ಣ ಪ್ರಾಸ್ತಾವಿಕ ನುಡಿಯಾಡಿದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಮಲೆಯಡ ಧರಣೇಶ್, ಸದಸ್ಯರುಗಳಾದ ಅಶೋಕ್, ರವಿ, ವಿಜು, ವಸಂತ, ಭಾರತಿ, ಸುನಿತಾ, ಅನಿತಾ, ಇದ್ದರು. ಖಜಾಂಚಿ ಮಲೆಯಡ ಬಿದ್ದಪ್ಪ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಕೊಡವ ಭಾಷಿಕ ಸಮುದಾಯಗಳ ಕೂಟ ಕೈಗೊಳ್ಳುವ ಎಲ್ಲ ಕಾರ್ಯಗಳಿಗೂ ಮಲೆಯ ಸಮಾಜ ಸಂಪೂರ್ಣ ಸಹಕಾರ ನೀಡಲಿದೆ ಎಂಬ ನಿರ್ಣಯ ಕೈಗೊಳ್ಳಲಾಯಿತು. ಮೇಘನಾ,ಉಷಾ,ಧನ್ಯ ಪ್ರಾರ್ಥಿಸಿದರು. ಮಲೆಯಡ ಸವಿತಾ ಮುತ್ತಣ್ಣ ಸ್ವಾಗತಿಸಿ, ನಿರೂಪಿಸಿದರು. ಮರಗೋಡು ಉಷಾ ವಂದಿಸಿದರು.