ಸುಂಟಿಕೊಪ್ಪ, ಜ. ೭: ಪಂಚಾಯಿತಿಯ ನೂತನ ಸದಸ್ಯರೋರ್ವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಧ್ವನಿ ಸಂದೇಶವನ್ನು ನಾಗೇಶ್ ಪೂಜಾರಿ ಎಂಬವರು ರವಾನಿಸಿ ತೇಜೋವಧೆಗೊಳಿಸಿದ್ದಾರೆಂದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸದಸ್ಯರಾದ ಪಿ.ಎಫ್. ಸಬಾಸ್ಟೀನ್ ದೂರು ದಾಖಲಿಸಿದ್ದಾರೆ.

ತಾ. ೨ ರಂದು ಸುಂಟಿಕೊಪ್ಪ ೧ನೇ ವಿಭಾಗದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಲು ಆಗಮಿಸಿದ್ದರು. ಈ ಸಂದರ್ಭ ಈ ಭಾಗದಿಂದ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯ ಪಿ.ಎಫ್. ಸಬಾಸ್ಟೀನ್ ಅವರು ಶಾಸಕರಿಗೆ ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭ ನೂತನವಾಗಿ ಆಯ್ಕೆಗೊಂಡು ಆಗಮಿಸಿದ್ದ ಎಲ್ಲಾ ಸದಸ್ಯರಿಗೂ ಶಾಸಕರು ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಮೊಬೈಲ್‌ನಲ್ಲಿ ತೆಗೆದ ಛಾಯಾಚಿತ್ರವನ್ನು ಬಳಸಿಕೊಂಡು ಶಾಸಕರನ್ನು ಮತ್ತು ಸಬಾಸ್ಟಿನ್ ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಿ ಧ್ವನಿ ಸಂದೇಶವನ್ನು ಲಗತ್ತಿಸಿ ಸಾಮಾಜಿಕ ಜಾಲತಾಣದಲ್ಲಿ ನಾಗೇಶ್ ಹರಿಯಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸಬಾಸ್ಟೀನ್ ಅವರು ಕೃತ್ಯವನ್ನು ಎಸಗಿದ ನಾಗೇಶ್ ಪೂಜಾರಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ದೂರು ದಾಖಲಿಸಿಕೊಂಡು ನಾಗೇಶ್ ಪೂಜಾರಿ ವಿರುದ್ಧ ಮುಂದಿನ ತನಿಖೆ ಕೈಗೊಂಡಿದ್ದಾರೆ.