ಗೋಣಿಕೊಪ್ಪ ವರದಿ, ಜ. ೬: ಆರ್ಕಿಡ್ ಸಸ್ಯಾಭಿವೃದ್ಧಿಯಲ್ಲಿ ಸಾವಯವ ನಿರ್ವಹಣಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಯುವ ವಿಜ್ಞಾನಿ ಡಾ. ಕಾವೇರಿ ದೇವಯ್ಯ ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ನರ್ಸರಿ ಕೆಲಸಗಾರರ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಆರ್ಕಿಡ್ ಸಸ್ಯಾಭಿವೃದ್ಧಿಗೆ ಸೂಕ್ತ ಸಲಹೆ ನೀಡಿದರು.

ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ಪ್ರಕೃತಿಗೆ ಹೆಚ್ಚು ಲಾಭ ತರುತ್ತದೆ. ಅತೀ ದೊಡ್ಡ ಕುಟುಂಬ ವರ್ಗಕ್ಕೆ ಸೇರಿರುವ ಆರ್ಕಿಡ್‌ಗಳ ವೈವಿಧ್ಯ ಬಣ್ಣಗಳು, ವೈವಿದ್ಯ ಶೈಲಿಗಳು ಹೆಚ್ಚು ಸೆಳೆಯುತ್ತವೆ. ಇದನ್ನು ಉದ್ಯಮವಾಗಿ ಅಳವಡಿಸಿಕೊಳ್ಳಲು ಅವಕಾಶವಿದೆ ಎಂದರು.

ವಿವಿಧ ಆರ್ಕಿಡ್‌ಗಳ ವರ್ಗೀಕರಣಕ್ಕೆ ಅನುಗುಣವಾಗಿ ಸೂಕ್ತವಾದ ತಾಪಮಾನ, ನೆರಳು, ಬೆಳಕು, ಬೆಳೆಯುವ ವಿಧಾನ, ಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ಅವರು ಮಾಹಿತಿ ನೀಡಿದರು. ವಿಜ್ಞಾನಿ ಡಾ. ಪ್ರಭಾಕರ್ ಹಾಜರಿದ್ದರು.