ಸಿದ್ದಾಪುರ, ಜ. ೬: ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಸೇರಿ ನಾಟಾಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ವಾಲ್ನೂರು - ತ್ಯಾಗತ್ತೂರು ಗ್ರಾಮದ ನಿವಾಸಿಯಾಗಿರುವ ನಿಸಾರ್ ಎಂಬಾತನ ಮಾರುತಿ ಓಮ್ನಿ ವ್ಯಾನ್‌ನಲ್ಲಿ (ಕೆಎ-೦೩ ಎನ್-೩೦೪) ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿರುವ ಸಮಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿ ವ್ಯಾನ್ ಹಾಗೂ ಮರದ ನಾಟಾಗಳನ್ನು ಗುಡ್ಡೆಹೊಸೂರು ಬಳಿ ವಶಪಡಿಸಿ ಕೊಂಡಿದ್ದಾರೆ. ಆರೋಪಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಆರೋಪಿ ನಿಸಾರ್ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿಯ ಬಂಧನಕ್ಕೆ ಶೋಧಕಾರ್ಯ ನಡೆಸುತ್ತಿದ್ದಾರೆ. ಮರಗಳನ್ನು ಕುಶಾಲನಗರದ ತಾವರೆಕೆರೆ ಬಳಿಯ ಮರದ ಮಿಲ್‌ಗೆ ಸಾಗಾಟ ಮಾಡಲಾಗುತ್ತಿತ್ತು.

ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಡಿ.ಸಿ.ಎಫ್. ಪ್ರಭಾಕರನ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ನೆಹರು ಹಾಗೂ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ಅರಣ್ಯ ರಕ್ಷಕ ಚರಣ್ ಕುಮಾರ್, ಜಗದೀಶ್, ಅಪ್ಪಸ್ವಾಮಿ, ಚಾಲಕ ವಾಸುದೇವ ಪಾಲ್ಗೊಂಡಿದ್ದರು. ಮರದ ಮೌಲ್ಯ ೧ ಲಕ್ಷ ರೂ. ಎಂದು ಅಂದಾಜಿಸಲಾಗಿದೆ.