ಮಡಿಕೇರಿ, ಜ. ೩: ನಗರದ ಬಾಲಭವನದಲ್ಲಿ ಹಿರಿಯ ನಾಗರಿಕರ ವೇದಿಕೆ ವತಿಯಿಂದ ವಾರ್ಷಿಕ ಸಭೆಯು ವೇದಿಕೆಯ ಅಧ್ಯಕ್ಷ ಕೊಂಗAಡ ಎ. ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸದಸ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವೇದಿಕೆಯ ಆರ್ಥಿಕ ಪರಿಸ್ಥಿತಿ, ಬೆಳವಣಿಗೆ, ಕಾರ್ಯ ಚಟುವಟಿಕೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರ ನೀಡಿದರು.
ಕಾರ್ಯದರ್ಶಿ ಅರವಿಂದ ಅವರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳ ವಿವರಗಳನ್ನು ನೀಡಿದರು. ಬಲ್ಲಂಡ ನಂಜಪ್ಪ ಅವರು ಕಳೆದ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಸಭೆಗೆ ಓದಿ ಹೇಳಿದರು. ವೀರಾಜಪೇಟೆ ಡಾ. ನರಸಿಂಹ ಅವರು ಕೋವಿಡ್-೧೯ ರೋಗದ ಬಗ್ಗೆ ತಮಗಾದ ಅನುಭವ ಹಾಗೂ ಜಾಗ್ರತೆ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಸಂಪತ್ಕುಮಾರ್ ಅವರು ಹಿರಿಯ ನಾಗರಿಕರ ಹಕ್ಕುಗಳು ಮತ್ತು ರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಲ್ಲಿ ಹೆಚ್ಚಿನ ರಿಯಾಯಿತಿ ಕೊಡುವಂತೆಯೂ, ಕಚೇರಿಗಳಲ್ಲಿ ಹಿರಿಯ ನಾಗರಿಕರಿಗೆ ಸತಾಯಿಸದೆ ಅವರ ಕೆಲಸಗಳನ್ನು ಶೀಘ್ರ ಮಾಡಿಸಿಕೊಡುವಂತೆ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಮುಖಾಂತರ ಬರೆದು ಕೇಳಿಕೊಳ್ಳುವಂತೆ ಕೋರಲಾಯಿತು.
ವೇದಿಕೆಯ ಸ್ಥಾಪಕಾಧ್ಯಕ್ಷ ಕೋದಂಡ ಎಂ. ಮಾದಪ್ಪ, ಉಪಾಧ್ಯಕ್ಷೆ ದಂಬೆಕೋಡಿ ಲೀಲಾ ಚಿಣ್ಣಪ್ಪ, ಮಾಜಿ ಅಧ್ಯಕ್ಷರುಗಳಾದ ತೀತಿಯಂಡ ತಿಮ್ಮಯ್ಯ ಮತ್ತು ಜಿ.ಟಿ. ರಾಘವೇಂದ್ರ, ಖಜಾಂಚಿ ಮುಂಜಾAದಿರ ಸುಮತಿ, ಜಂಟಿ ಕಾರ್ಯದರ್ಶಿ ಮೇದುರ ಗಂಗಮ್ಮ ಹಾಗೂ ಇತರರು ಇದ್ದರು. ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಪ್ರಾರ್ಥಿಸಿದರು. ಪಟ್ರಪಂಡ ಸೋಮಣ್ಣ ವಂದಿಸಿದರು.