ಭಾಗಮಂಡಲ, ಜ. ೨: ಪುಣ್ಯಕ್ಷೇತ್ರ ಭಾಗಮಂಡಲದ ತ್ಯಾಜ್ಯಗಳು ಪವಿತ್ರ ಕಾವೇರಿ ನದಿಗೆ ಸೇರುತ್ತಿರುವುದರಿಂದ ಕಾವೇರಿ ನದಿ ಕಲುಷಿತವಾಗುತ್ತಿದ್ದು ಈ ನಿಟ್ಟಿನಲ್ಲಿ ದ್ರವ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ೨ ಕೋಟಿ ೪೧ಲಕ್ಷ ರೂ. ಮಂಜೂರಾಗಿರುವ ಹಿನ್ನೆಲೆಯಲ್ಲಿ ಇದರ ಭೂಮಿಪೂಜೆಯನ್ನು ಶಾಸಕ ಕೆ.ಜಿ. ಬೋಪಯ್ಯ ಇಂದು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಪವಿತ್ರ ಕಾವೇರಿ ನದಿ ಮಲಿನವಾಗುತ್ತಿದ್ದು ಆ ನಿಟ್ಟಿನಲ್ಲಿ ದ್ರವ ತ್ಯಾಜ್ಯ ಘಟಕ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು ಆಧುನಿಕ ರೀತಿಯಲ್ಲಿ ಈ ಕಾರ್ಯ ನಡೆಯಲಿದೆ. ೩ ತಿಂಗಳಲ್ಲಿ ಕೆಲಸ ಭಾಗಮಂಡಲ ದೇವಾಲಯಕ್ಕೆ ಸೇರಿದ ೧೩.೨೨ ಎಕರೆ ಜಾಗದಲ್ಲಿ ೨೫ ಸೆಂಟ್ಸ್ ಜಾಗವನ್ನು ಈ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಪಂಚಾಯಿತಿ ಹಾಗೂ ದೇವಾಲಯ ಆಡಳಿತ ಮಂಡಳಿ ಇದರ ನಿರ್ವಹಣೆ ಮಾಡಲಿದೆ. ವಾಹನದ ವ್ಯವಸ್ಥೆ ಕೂಡ ಇರುತ್ತದೆ ಎಂದರು. ಬಳಿಕ ದೇವಾಲಯದ ಕೇಶಮುಂಡನ ಜಾಗ ಪರಿಶೀಲನೆ ನಡೆಸಿ ದೇವಾಲಯಕ್ಕೆ ಸಂಬAಧಪಟ್ಟ ಎರಡು ಶೌಚಾಲಯಗಳಿದ್ದು ಅಲ್ಲಿನ ದ್ರವತ್ಯಾಜ್ಯ ಒಂದೆಡೆ ಬರುವಂತೆ ಮಾಡಿ ಘಟಕಕ್ಕೆ ಸಾಗಿಸಲು ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರಲ್ಲದೆ, ಹಿಂದೆ ಜಾತ್ರೆ ವಿಶೇಷ ಅನುದಾನದಲ್ಲಿ ಬಂದ ರೂ.೫ ಲಕ್ಷದಲ್ಲಿ ಈ ಹಿಂದಿನ ಪಂಚಾಯಿತಿ ಆಡಳಿತ ಮಂಡಳಿ ಶೌಚಾಲಯ ನಿರ್ಮಾಣಕ್ಕೆ ಮುಂದಾದ ಜಾಗ ಪರಿಶೀಲನೆ ನಡೆಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಸತೀಶ್ಕುಮಾರ್ ಮಾತನಾಡಿ ಭಾಗಮಂಡಲದಲ್ಲಿ ಬಸ್ಸು ನಿಲ್ದಾಣ ಮತ್ತು ಪಟ್ಟಣದಲ್ಲಿ ಶೌಚಾಲಯದ ವ್ಯವಸ್ಥೆ ಇದ್ದು ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಬಳಕೆ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷಿö್ಮ, ಎಇಇ ಸ್ವಚ್ಛತೆ ಮತ್ತು ಗ್ರಾಮೀಣ ನೈರ್ಮಲ್ಯ ಅಧಿಕಾರಿಗಳಾದ ರಶ್ಮಿ, ಅಂಬೇಡ್ಕರ್ ಹನುಗುಂದ, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ, ಗ್ರಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಿತ, ಗ್ರಾ.ಪಂ. ಸದಸ್ಯರಾದ ಕಾಳನ ರವಿ, ಸಿರಕಜೆ ನಾಗೇಶ್, ನಿತ್ಯಾನಂದ, ಪೂವಮ್ಮ, ದುರ್ಗಾವತಿ, ಹಾಗೂ ಸ್ಥಳೀಯರಾದ ಬಿ.ಎಂ. ರಾಜೀವ್, ರಾಜುರೈ, ಪುರುಷೋತ್ತಮ, ಚಲನ್ ಇನ್ನಿತರರು ಇದ್ದರು.