ಮಡಿಕೇರಿ, ಜ. ೨: ಉಜಿರೆಯಲ್ಲಿ ಗ್ರಾ.ಪಂ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರ ಬಿಜೆಪಿ ಯುವ ಮೋರ್ಚ ಹಾಗೂ ಮಹಿಳಾ ಮೋರ್ಚ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಎಸ್‌ಡಿಪಿಐ ಹಾಗೂ ಪಿಎಫ್‌ಐ ವಿರುದ್ಧ ಘೋಷಣೆ ಕೂಗಿ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿದರು.
ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಮಾತನಾಡಿ, ವಿಜಯೋತ್ಸವ ಆಚರಣೆ ಮಾಡಲು ನಮ್ಮ ವಿರೋಧವಿಲ್ಲ. ಆದರೇ, ಎಸ್‌ಡಿಪಿಐ ಕಾರ್ಯಕರ್ತರು ದೇಶದ್ರೋಹ ಕೆಲಸ ಮಾಡಿದ್ದಾರೆ. ಅವರ ಸಂಬAಧಿಕರು ಪಾಕಿಸ್ತಾನದಲ್ಲಿದ್ದರೆ. ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ. ಅಲ್ಲಿಗೆ ಎಸ್‌ಡಿಪಿಐ ಕಾರ್ಯಕರ್ತರು ತೆರಳಲಿ. ದೇಶ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿಜೆಪಿ ವಕ್ತಾರ ಮಹೇಶ್ ಜೈನಿ ಮಾತನಾಡಿ, ಪಿಎಫ್‌ಐ, ಎಸ್‌ಡಿಪಿಐ ದೇಶ ವಿರೋಧಿ ಚಟುವಟಿಕೆ ಮಾಡುತ್ತಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಸೇರಿದಂತೆ ಹಲವು ಗಲಭೆಗೆ ಸಂಘಟನೆಗಳು ನೇರ ಕಾರಣವಾಗಿದೆ ಎಂದು ಆರೋಪಿಸಿದರು. ಸಮಾಜ ದ್ರೋಹಿ ಚಟುವಟಿಕೆ ಮಾಡುತ್ತಿರುವ ವರನ್ನು ಅಮಾಯಕರು ಎಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ದೇಶ ವಿರೋಧಿ ಘೋಷಣೆ ಕೂಗಿದವರನ್ನು ಪಕ್ಷ ಉಚ್ಚಾಟನೆ ಮಾಡಬೇಕು. ಪೊಲೀಸ್ ಇಲಾಖೆಗೆ ಇಂತವರು ಸವಾಲಾಗಿದ್ದಾರೆ. ಪೊಲೀಸ್ ಇಲಾಖೆ ಇವರನ್ನು ಎಡೆಮುರಿ ಕಟ್ಟುವ ಕೆಲಸ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರ ಯುವ ಬಿಜೆಪಿ ಅಧ್ಯಕ್ಷ ಪ್ರವೀಣ್ ಮಾತನಾಡಿ, ಘೋಷಣೆ ಕೂಗಿದವರನ್ನು ಬಂಧಿಸಿ ಗಡಿಪಾರು ಮಾಡಬೇಕು. ಭಾರತ ಸರ್ಕಾರದಿಂದ ಪಡೆಯುತ್ತಿರುವ ಸವಲತ್ತುಗಳನ್ನು ಕಡಿತ ಮಾಡಬೇಕೆಂದು ಒತ್ತಾಯಿಸಿದರು.
ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಪಣ್ಣ, ಉಪಾಧ್ಯಕ್ಷ ಅರುಣ, ಬಿ.ಕೆ ಜಗದೀಶ್, ಮಹಿಳಾ ಮೋರ್ಚ ಅಧ್ಯಕ್ಷೆ ಅನಿತಾ ಪೂವಯ್ಯ ಪ್ರಮುಖರಾದ ಕನ್ನಿಕೆ, ಸವಿತಾ ರಾಕೇಶ್, ಪೂಣಚ್ಚ, ಪಿ.ಎಸ್ ಪ್ರಕಾಶ್, ಮಂಜುಳಾ, ಕಲಾವತಿ, ಗೌರಮ್ಮ ಇದ್ದರು.