ಗೋಣಿಕೊಪ್ಪಲು, ಜ. ೨: ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗಲು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ವಿನಿಯೋಗಿಸುತ್ತಿದೆ. ಆದರೆ, ಸರ್ಕಾರ ನೀಡುವ ಅನುದಾನವನ್ನು ಸರಿಯಾಗಿ ಬಳಕೆ ಮಾಡದೆ ಕಳಪೆ ಕಾಮಗಾರಿಗಳನ್ನು ರಾತ್ರೋರಾತ್ರಿ ನಡೆಸಿ ಬೆಳಗಾಗುವು ದರೊಳಗೆ ರಸ್ತೆಯು ಸಂಪೂರ್ಣ ಕಿತ್ತು ಹೋದ ಘಟನೆ ಶ್ರೀಮಂಗಲ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ನಡೆದಿದೆ. ಇತಿಹಾಸ ಪ್ರಸಿದ್ದ ಇರ್ಪು ಜಲಪಾತಕ್ಕೆ ಹಾಗೂ ಇಲ್ಲಿರುವ ರಾಮೇಶ್ವರ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಾಜ್ಯದ ವಿವಿಧ ಭಾಗದಿಂದ ಆಗಮಿಸುತ್ತಿದ್ದಾರೆ. ಪ್ರವಾಸಿಗರಿಗೆ ಹಾಗೂ ಈ ಭಾಗದ ಜನತೆಗೆ ಅನುಕೂಲವಾಗಲು ಗುಣಮಟ್ಟದ ರಸ್ತೆ ಕಾಮಗಾರಿ ನಡೆಸಲು ಸರ್ಕಾರ ನಬಾರ್ಡ್ ಯೋಜನೆಯಲ್ಲಿ ೫೦ ಲಕ್ಷ ಅನುದಾನವನ್ನು ಬಿಡುಗಡೆಗೊಳಿ ಸಲಾಗಿತ್ತು. ಕೆ.ಆರ್.ನಗರ ತಾಲೂಕಿನ ಗುತ್ತಿಗೆದಾರ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಆಗಮಿಸಿದ ಗುತ್ತಿಗೆದಾರ ಕಾರ್ಮಿಕರಿಂದ ಕಳಪೆಮಟ್ಟದ ರಸ್ತೆ ಕಾಮಗಾರಿ ನಡೆಸಿ ಬೆಳಗಾಗುವುದ ರೊಳಗೆ ಕಾಮಗಾರಿ ಮುಗಿಸಿ ವಾಪಾಸ್ಸು ತೆರಳಿದ್ದಾರೆ ಎಂದು ಆರೋಪ ವ್ಯಕ್ತವಾಗಿದ್ದು, ಮುಂಜಾನೆ ಗ್ರಾಮಸ್ಥರು ರಸ್ತೆಯಲ್ಲಿ ಸಂಚರಿಸುವ ವೇಳೆ ರಸ್ತೆ (ಮೊದಲ ಪುಟದಿಂದ) ಸಂಪೂರ್ಣ ಕಿತ್ತು ಹೋಗಿದೆ. ಈ ಬಗ್ಗೆ ಈ ಭಾಗದ ಗ್ರಾಮಸ್ಥರು ಇಲಾಖೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಕೊಡಗು ಜಿಲ್ಲಾಧಿಕಾರಿಗೆ ಗುತ್ತಿಗೆದಾರನ ವಿರುದ್ಧ ದೂರು ನೀಡಿದ್ದಾರೆ.

ಲೊಕೋಪಯೋಗಿ ಇಲಾಖೆ, ಬಂದರು ಮತ್ತು ಒಳನಾಡು, ಜಲಸಾರಿಗೆ ಇಲಾಖೆ, ನಬಾರ್ಡ್ ಆರ್.ಐ.ಡಿ.ಎಫ್.೨೨ರ ಯೋಜನೆಯಡಿ ವೀರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ, ಬೀರುಗ, ಕುರ್ಚಿ, ಇರ್ಪು ದೇವಸ್ಥಾನದ ರಸ್ತೆ ಹಾಗೂ ಈ ಭಾಗದ ಸೇತುವೆ ನಿರ್ಮಾಣಕ್ಕಾಗಿ ರೂ. ೫೦ಲಕ್ಷ ಅನುದಾನವನ್ನು ಸರ್ಕಾರ ೨೦೧೮ ರಲ್ಲಿ ಮಂಜೂರು ಮಾಡಿತ್ತು. ಕಾಮಗಾರಿಯನ್ನು ೨೦೨೦ರಲ್ಲಿ ಪೂರ್ಣಗೊಳಿಸುವುದಾಗಿ ಇಲಾಖೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು.

ವರ್ಷದ ಅಂತ್ಯದೊಳಗೆ ಕಾಮಗಾರಿ ಪೂರೈಸದಿದ್ದಲ್ಲಿ ಅನುದಾನವು ಸರ್ಕಾರಕ್ಕೆ ವಾಪಾಸ್ಸು ಹೋಗುವ ಹಿನ್ನೆಲೆಯಲ್ಲಿ ಆತುರಕ್ಕೆ ಬಿದ್ದು ಗುತ್ತಿಗೆದಾರ ರಸ್ತೆ ಕಾಮಗಾರಿಯನ್ನು ರಾತ್ರೋರಾತ್ರಿ ಪೂರೈಸಿ ತೆರಳಿದ್ದಾರೆ. ಮುಂಜಾನೆ ವಾಹನಗಳು ಹೆಚ್ಚಾಗಿ ತೆರಳಿದ ಹಿನ್ನೆಲೆ ರಸ್ತೆಯ ಡಾಂಬರು ಕಿತ್ತು ಬಂದಿದೆ. ಇದರಿಂದ ಈ ಭಾಗದ ಗ್ರಾಮಸ್ಥರು ಅಸಮಧಾನಗೊಂಡಿದ್ದಾರೆ.

ಈ ರಸ್ತೆಯು ಕೇರಳ ರಾಜ್ಯದ ಲಿಂಕ್ ರಸ್ತೆಗೆ ಜೋಡಣೆಯಾಗುವು ದರಿಂದ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಗುತ್ತಿಗೆದಾರ ಈ ಮಾರ್ಗದಲ್ಲಿ ನಾಮಫಲಕ ಅಳವಡಿಸಿ ಕೆಲಸ ಸಂಪೂರ್ಣಗೊAಡಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಅನುದಾನವನ್ನು ಬಿಡುಗಡೆಗೊಳಿಸಿ ಕೊಂಡಿದ್ದಾರೆ.

-ಚಿತ್ರ ಸುದ್ದಿ, ಹೆಚ್.ಕೆ. ಜಗದೀಶ್