ನಿರಂತರ ಕಾಡಾನೆ ಹಾವಳಿನಾಡಿಗೆ ಲಗ್ಗೆಯಿಟ್ಟು ರೈತರ ಬೆಳೆಗಳನ್ನು ನಾಶ ಮಾಡುತ್ತಿದ್ದ ಕಾಡಾನೆಗಳು ಈಗ ನಾಡಿನಲ್ಲಿಯೇ ಟಿಕಾಣಿ ಹೂಡುವದರ ಮೂಲಕ ಗ್ರಾಮಸ್ಥರಿಗೆ ಬೆಳೆ ನಷ್ಟದೊಂದಿಗೆ ಜೀವಭಯ ಉಂಟು ಮಾಡಿವೆ.

ಒಂದು ವಾರದಿಂದ ಕುಂಜಿಲ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ೨-೩ ಕಾಡಾನೆಗಳು ರಾತ್ರಿಯಾಗುತ್ತಿದ್ದಂತೆ ಕುಂಜಿಲ ಸೇರಿದಂತೆ ನೆಲಜಿ, ಕೊಳಕೇರಿ ಗ್ರಾಮಗಳ ತೋಟಗಳಿಗೆ ಲಗ್ಗೆಯಿಡುತ್ತಿವೆ. ತೆಂಗಿನ ಮರ, ಬಾಳೆ, ಕಾಫಿ ಬೆಳೆಗಳನ್ನು ತಿಂದು ನಾಶಗೊಳಿಸುತ್ತಿವೆ. ಕಾಫಿ ಕಣದಲ್ಲಿ ಒಣಹಾಕಿದ ಕಾಫಿಯನ್ನು ಧ್ವಂಸ ಮಾಡುತ್ತಿವೆ. ಟಾರ್ಪಾಲುಗಳನ್ನು ಹರಿದು ಹಾಕುತ್ತಿರುವದು ಕಂಡು ಬರುತ್ತಿದೆ.

ಭತ್ತದ ಕೃಷಿ ಅಪರೂಪವಾಗಿರುವ ಕಾಲದಲ್ಲಿ ಅಲ್ಪಸ್ವಲ್ಪ ಭತ್ತದ ಕೃಷಿ ಮಾಡುವವರಿಗೂ ಕೂಡ ಕಾಡಾನೆಗಳು ಕಂಟಕವಾಗಿವೆ. ನೆಲಜಿ ಗ್ರಾಮದ ಮುಕ್ಕಾಟಿರ ವಿನಯ್ ಅವರ ಭತ್ತದ ಗದ್ದೆಗೆ ಮೂರು ಕಾಡಾನೆಗಳು ಲಗ್ಗೆಯಿಟ್ಟು, ಕುಯ್ದು ಹಾಕಿರುವ ಭತ್ತದ ಬೆಳೆಯನ್ನು ತುಳಿದು ಅತ್ತಿಂದಿತ್ತ ಎಳೆದಾಡಿ ಹೆಚ್ಚಿನ ನಷ್ಟ ಉಂಟು ಮಾಡಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಕಾಫಿ ಕುಯ್ಲು ಆರಂಭವಾಗಿದ್ದು, ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಬೆಳೆಗಾರರಿಗೆ ಕಾಡಾನೆ ಸಮಸ್ಯೆಯು ಬೆಂಕಿಯಿAದ ಬಾಣಲೆಗೆ ಬಿದ್ದಂತಾಗಿದೆ. ಮೊದಲೇ ಕಾರ್ಮಿಕರಿಲ್ಲ. ಅವರ ಕೈಕಾಲು ಹಿಡಿದು ಕರೆತಂದರೆ ಕಾಡಾನೆ ಭೀತಿಯಿಂದ ಅವರು ವಾಪಾಸಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ದೂರು ನೀಡಿದೊಡನೆ ಅರಣ್ಯ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುತ್ತಿರುವದು ಬಿಟ್ಟರೆ ಇವುಗಳನ್ನು ಕಾಡಿಗಟ್ಟುವ ಕಾರ್ಯವನ್ನು ಇನ್ನೂ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಆದುದರಿಂದ ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ಕೈಗೊಂಡು ಬೆಳೆಗಾರರ ಸಮಸ್ಯೆ ಪರಿಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

- ಪಿ.ವಿ. ಪ್ರಭಾಕರ್