ಮಡಿಕೇರಿ, ಜ.೧; ಮಡಿಕೇರಿ ನಗರಕ್ಕೆ ಕಗ್ಗಂಟಾಗಿದ್ದ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಂತಾಗಿದೆ. ಕಸ ವಿಲೇವಾರಿ ಮಾಡಲು ಜಿಲ್ಲಾಡಳಿತ ಹತ್ತು ಎಕರೆ ಪರ್ಯಾಯ ಜಾಗ ಮಂಜೂರು ಮಾಡಿದ್ದು, ಸದ್ಯದಲ್ಲಿಯೇ ಸ್ಟೋನ್ ಹಿಲ್ ಬಳಿಯಿಂದ ಎರಡನೇ ಮೊಣ್ಣಂಗೇರಿಗೆ ಕಸ ವಿಲೇವಾರಿಯಾಗಲಿದೆ.

ಮಡಿಕೇರಿ ನಗರ ಹಾಗೂ ಸುತ್ತಮುತ್ತಲಿನ ಕಸ, ತ್ಯಾಜ್ಯಗಳನ್ನು ಸ್ಟೋನ್ ಹಿಲ್ ಬಳಿಯ ಬೆಟ್ಟ ಪ್ರದೇಶದಲ್ಲಿ ತಂದು ಸುರಿಯಲಾಗುತ್ತಿತ್ತು. ಕಳೆದ ೨೦೦೫ರಿಂದಲೇ ಕಸ ಸುರಿಯುತ್ತಿದ್ದ ಪರಿಣಾಮ ಅಲ್ಲಿ ಹೊಸತೊಂದು ಕಸದ ಬೆಟ್ಟವೇ ನಿರ್ಮಾಣವಾಗಿತ್ತು. ಕಸ ವಿಂಗಡಣೆ ಹಾಗೂ ವಿಲೇವಾರಿ ಆಗದ್ದರಿಂದ ಸಂಗ್ರಹಗೊAಡ ಕಸ ಕೊಳೆತು ಇಡೀ ಪ್ರದೇಶವೇ ದುರ್ಗಂಧಮಯವಾಗಿತ್ತು. ಅಲ್ಲದೆ ಸನಿಹದ ಜನವಸತಿ ಪ್ರದೇಶಗಳಿಗೆ ತೊಂದರೆಯಾಗುವದ ರೊಂದಿಗೆ ರೋಗ ಹರಡುವ ಭೀತಿ ಕೂಡ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಮಣ್ಯನಗರ, ರೈಫಲ್ ರೇಂಜ್, ವಿದ್ಯಾನಗರ ಹಾಗೂ ಕನ್ನಿಕಾ ಬಡಾವಣೆ ನಿವಾಸಿಗಳು ಸೇರಿಕೊಂಡು ಎಸ್,ಆರ್.ವಿ,ಕೆ. ಹೆಸರಿನಲ್ಲಿ ಸಂಘ ರಚಿಸಿಕೊಂಡು ಸಂಘದ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ

(ಮೊದಲ ಪುಟದಿಂದ) ನ್ಯಾಯಾಲಯ ಸರಕಾರ, ನಗರಸಭೆ ಹಾಗೂ ಪರಿಸರ ನೈರ್ಮಲ್ಯ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡು ಪರ್ಯಾಯ ಜಾಗ ಗುರುತಿಸಿವಂತೆ ಸೂಚನೆ ನೀಡಿತ್ತು. ಅಲ್ಲದೇ, ಕಳೆದ ತಾ.೨೨ರಂದು ಮತ್ತೆ ವಿಚಾರಣೆ ನಡೆಸಿ ಮುಂದಿನ ನಾಲ್ಕು ವಾರಗಳಲ್ಲಿ ಜಾಗ ಗುರುತಿಸಿ ವರದಿ ಸಲ್ಲಿಸುವಂತೆ ಸರಕಾರಕ್ಕೆ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಎಸ್ ಆರ್ ವಿ ಕೆ ಸಂಘದ ಪದಾಧಿಕಾರಿಗಳು ನಗರಸಭಾ ಆಯುಕ್ತರು, ತಹಶೀಲ್ದಾರರನ್ನು ಕರೆದೊಯ್ದು ಮಡಿಕೇರಿ ಸನಿಹ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎರಡನೇ ಮೊಣ್ಣಂಗೇರಿ ಗ್ರಾಮದ ಸ.ನಂ. ೨೦/೧ರಲ್ಲಿ ಹತ್ತು ಎಕರೆ ಜಾಗ ಗುರುತಿಸಿದ್ದರು. ಈ ಬಗ್ಗೆ ನಗರಸಭೆ ಹಾಗೂ ಸರಕಾರಿ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ಕೂಡ ನೀಡಿದ್ದರು. ನಗರ ಸಭೆ ವತಿಯಿಂದ ಜಾಗ ಮಂಜೂರಾತಿಗಾಗಿ ಜಿಲ್ಲಾಡಳಿತಕ್ಕೆ ಮನವಿ ಕೂಡಾ ಸಲ್ಲಿಸಲಾಗಿತ್ತು.

ಇದೀಗ ಜಿಲ್ಲಾಧಿಕಾರಿಗಳು ಹತ್ತು ಎಕರೆ ಜಾಗ ಮಂಜೂರು ಮಾಡಿದ್ದಾರೆ. ಚುನಾವಣೆ ಇದ್ದುದರಿಂದ ಪ್ರಕ್ರಿಯೆ ಕೊಂಚ ವಿಳಂಬವಾಗಿದ್ದು, ತಾ. ೨೮ರಂದು ಜಿಲ್ಲಾಧಿಕಾರಿಗಳು ಜಾಗ ಮಂಜೂರು ಮಾಡಿ ಆದೇಶಿಸಿರುವದಾಗಿ ತಿಳಿದು ಬಂದಿದೆ. ಹತ್ತು ಹಲವು ವರ್ಷಗಳ ಹೋರಾಟದ ಬಳಿಕ ಕಸದ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ. ಹೋರಾಟಕ್ಕೆ ನ್ಯಾಯ ಸಿಕ್ಕಿದ ಸಂತಸ ಎಸ್ ಆರ್ ವಿ ಕೆ ಸಂಘದವರದ್ದಾಗಿದೆ. ಕಸದ ಸಮಸ್ಯೆ ಬಗ್ಗೆ ‘ಶಕ್ತಿ’ ಕಳೆದ ಎರಡು ವರ್ಷಗಳಿಂದ ನಗರಸಭೆ, ಜಿಲ್ಲಾಡಳಿತ, ಸರಕಾರದ ಗಮನ ಸೆಳೆಯುತ್ತಲೇ ಬಂದಿದೆ.

-ಸAತೋಷ್