ಸೋಮವಾರಪೇಟೆ, ಡಿ. ೩೦: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿಯ ಶಿರಂಗಳ್ಳಿ-೩ ಮತ ಕ್ಷೇತ್ರದಲ್ಲಿ ಬರೋಬ್ಬರಿ ೩ ಸುತ್ತುಗಳ ಮತ ಎಣಿಕೆ ನಡೆಯಿತು. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಈರ್ವರ ನಡುವೆ ಗೆಲುವಿನ ಹಾವು ಏಣಿಯಾಟ ನಡೆದು ಮತ ಎಣಿಕೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಸುಸ್ತಾದರು.

ಪ್ರಥಮ ಸುತ್ತಿನಲ್ಲಿ ನಡೆದ ಎಣಿಕೆಯಲ್ಲಿ ಕಾರ್ಯಪ್ಪ ಅವರು ೨೧೦ ಮತಗಳನ್ನು ಪಡೆದರೆ ಎದುರಾಳಿ ಅಭ್ಯರ್ಥಿ ನಂಜುAಡ ಅವರು ೨೦೮ ಮತಗಳನ್ನು ಪಡೆದಿದ್ದರು. ಇಲ್ಲಿ ಮತಪತ್ರದಲ್ಲಿ ಹೆಬ್ಬೆಟ್ಟಿನ ಗುರುತು ಹಾಕಿದ್ದರಿಂದ ಗೊಂದಲ ಉಂಟಾಗಿತ್ತು. ಈ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ನಂಜುAಡ ಅವರು ಮರು ಎಣಿಕೆಗೆ ಒತ್ತಾಯಿಸಿದರು.

೨ನೇ ಸುತ್ತಿನ ಎಣಿಕೆಯಲ್ಲಿ ನಂಜುAಡ ಅವರಿಗೆ ೨೦೫ ಮತಗಳು ಲಭಿಸಿದರೆ, ಕಾರ್ಯಪ್ಪ ಅವರಿಗೆ ೨೦೪ ಮತಗಳು ಬಂದವು. ಇದಕ್ಕೆ ಮತ್ತೆ ಕಾರ್ಯಪ್ಪ ಅವರು ಆಕ್ಷೇಪ ಸಲ್ಲಿಸಿದರು. ಅಂತಿಮವಾಗಿ ಮೂರನೇ ಸುತ್ತಿನ ಮತ ಎಣಿಕೆಗೆ ಅಧಿಕಾರಿಗಳು ಅವಕಾಶ ಕಲ್ಪಿಸಿದರು.

ಈ ಸಂದರ್ಭ ಮತ್ತೆ ಗೊಂದಲ ಉಂಟಾಯಿತು. ಮೂರನೇ ಸುತ್ತಿನ ಎಣಿಕೆಗೆ ಅವಕಾಶ ನೀಡಬಾರದು ಎಂದು ನಂಜುAಡ ಅವರ ಕಡೆಯವರು ಅಧಿಕಾರಿಯನ್ನು ಆಗ್ರಹಿಸಿದರು. ಅಂತಿಮವಾಗಿ ಶಾಸಕ ಅಪ್ಪಚ್ಚು ರಂಜನ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರ ಸಮಕ್ಷಮದಲ್ಲಿ ಮೂರನೇ ಸುತ್ತಿನ ಎಣಿಕೆ ನಡೆದು, ಎರಡನೇ ಸುತ್ತಿನ ಫಲಿತಾಂಶ ಹೊರಬಿದ್ದಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ನಂಜುAಡ ಅವರು ೧ ಮತದ ಅಂತರದಲ್ಲಿ ಜಯಶಾಲಿಯಾದರು. ಮತ ಎಣಿಕೆಯಲ್ಲಿ ನಿರತರಾಗಿದ್ದ ಚುನಾವಣಾಧಿಕಾರಿ ವೆಂಕಟನಾಯಕ್ ಮತ್ತು ಇತರರು ೪ ಗಂಟೆಗಳ ಕಾಲ ಮೂರು ಬಾರಿ ಮತಪತ್ರಗಳನ್ನು ಎಣಿಸಿ ಸುಸ್ತಾದರು.