ಕೊಡಗಿನ ಗಡಿಯಾಚೆ

ರಾಜ್ಯದಲ್ಲಿ ಬಿಜೆಪಿ ಬೆಂಬಲಿತರ ಮುನ್ನಡೆ

ಬೆಂಗಳೂರು, ಡಿ. ೩೦: ರಾಜ್ಯದ ೫,೭೨೮ ಗ್ರಾಮ ಪಂಚಾಯಿತಿಗಳ ೮೨,೬೧೬ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಿತು. ಇಂದು ಸಂಜೆಯ ವರದಿಗಳ ಪ್ರಕಾರ, ಬಿಜೆಪಿ ಬೆಂಬಲಿತ ೫,೩೪೦ ಕಾಂಗ್ರೆಸ್ ಬೆಂಬಲಿತ ೩೦೯೫, ಜೆಡಿಎಸ್ ಬೆಂಬಲಿತ ೧೫೭೦ ಸದಸ್ಯರು ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮತ ಎಣಿಕೆ ವೇಳೆ ಕೆಲವು ಅವಘಡಗಳೂ ವರದಿಯಾಗಿದ್ದು, ಮತ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದ ಮೈಸೂರಿನಲ್ಲಿ ಚುನಾವಣಾಧಿಕಾರಿಯಾಗಿದ್ದ, ಪಿಡಬ್ಲು÷್ಯಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬೋರೇಗೌಡ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ಚಾಕು ತಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ವರದಿಯಾಗಿದೆ. ಅಭ್ಯರ್ಥಿಯ ಪರ ಏಜೆಂಟ್ ಆಗಿ ಶಹಾಪುರ ನಗರದ ಪದವಿ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಮತ ಎಣಿಕೆ ಕೇಂದ್ರಕ್ಕೆ ಅಷ್ಫಾಕ್ ಎಂಬಾತ ಚಾಕು ಹಿಡಿದು ಬಂದಿದ್ದ, ಈತ ಪೊಲೀಸ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಮತದಾನಕ್ಕೂ ಮುನ್ನ ವಾಮಾಚಾರ, ಮಾಟ ಮಂತ್ರಗಳ ಬಗ್ಗೆ ಈ ಹಿಂದೆ ವರದಿ ಪ್ರಕಟ ವಾಗಿತ್ತು. ಆದರೆ ಈಗ ಮತ ಎಣಿಕೆ ದಿನದಂದು ಮತ ಎಣಿಕೆ ಕೇಂದ್ರದ ಎದುರು ವಾಮಾಚಾರ ನಡೆದಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.

ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿ

ಶ್ರೀನಗರ, ಡಿ. ೩೦: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾವಾಯ್ಪೊರಾ ಪ್ರದೇಶದಲ್ಲಿ ಭದ್ರತಾಪಡೆಗಳು ಎನ್‌ಕೌಂಟರ್ ನಡೆಸಿದ್ದು, ಮೂವರು ಉಗ್ರರÀನ್ನು ಹತ್ಯೆ ಮಾಡಿದೆ. ಲಾವಾಯ್ಪೊರಾದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಕಳೆದ ರಾತ್ರಿಯಿಂದಲೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಗಿಳಿದಿದ್ದವು. ಈ ವೇಳೆ ಅಡಗಿ ಕುಳಿತಿದ್ದ ಉಗ್ರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಸ್ಥಳವನ್ನು ಸುತ್ತುವರೆದ ಭದ್ರತಾಗಳು ಎನ್‌ಕೌಂಟರ್ ನಡೆಸಿ ಉಗ್ರನೋರ್ವನನ್ನು ಹತ್ಯೆ ಮಾಡಿದ್ದಾರೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಬಾಲಕೋಟ್‌ನ ಡಬ್ಬಿ ಗ್ರಾಮದಲ್ಲಿ ಉಗ್ರರ ಅಡಗು ತಾಣವೊಂದು ಪತ್ತೆಯಾಗಿದ್ದು, ಈ ಅಡಗುತಾಣದಲ್ಲಿ ಭದ್ರತಾ ಪಡೆಗಳು ೨ ಪಿಸ್ತೂಲು, ೭೦ ಪಿಸ್ತೂಲುಗಳ ಗುಂಡುಗಳು, ೨ ಗ್ರೆನೇಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ದೇಶದಲ್ಲಿ ರೂಪಾಂತರಿ ಕೊರೊನಾ ಭೀತಿ

ನವದೆಹಲಿ, ಡಿ. ೩೦: ದೇಶಾದ್ಯಂತ ಬ್ರಿಟನ್‌ನ ರೂಪಾಂತರಿ ಕೊರೊನಾ ವೈರಸ್ ಭೀತಿ ಎದುರಾಗಿದ್ದು, ಈ ನೆರಳಿನಲ್ಲೇ ನಡೆಯುವ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಗಳ ಬಗ್ಗೆ ಅತ್ಯಂತ ಜಾಗರೂಕರಾಗಿರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ಸೂಚನೆ ನೀಡಿದೆ. ಹೊಸದಾಗಿ ಪತ್ತೆಯಾಗಿರುವ ವೈರಾಣುವನ್ನು ಕೋವಿಡ್-೧೯ ಸೂಪರ್ ಸ್ಪೆçಡರ್ (ವೇಗವಾಗಿ ಹರಡುವ ವೈರಸ್) ಎಂದೇ ಹೇಳಲಾಗುತ್ತಿದ್ದು, ಚಳಿಗಾಲದಲ್ಲಿ ಇದರ ಹರಡುವಿಕೆಯ ತೀವ್ರತೆಯನ್ನು ಕಡಿಮೆ ಮಾಡುವುದಕ್ಕೆ ಜನಸಂದಣಿಯನ್ನು ನಿಗ್ರಹಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಪತ್ರ ಬರೆದಿದ್ದು, ಕಳೆದ ಮೂರುವರೆ ತಿಂಗಳಲ್ಲಿ ದೇಶಾದ್ಯಂತ ಸಕ್ರಿಯ ಕೋವಿಡ್-೧೯ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದೂ ಹೇಳಿದ್ದಾರೆ.

ಕಡಲತೀರಗಳಿಗೆ ಪ್ರವೇಶ ನಿಷೇಧ

ಮಂಗಳೂರು, ಡಿ. ೩೦: ಕೋವಿಡ್-೧೯ ಹೊಸ ಸ್ವರೂಪದ ಸೋಂಕು ಹರಡುವಿಕೆ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಉಲ್ಲಾಳ, ಸೋಮೇಶ್ವರ, ಮೊಗವೀರ ಪಟ್ಟಣ, ಪಣಂಬೂರು, ತಣ್ಣೀರ್ಬಾಪವಿ, ಸಸಿಹಿತ್ಲು ಮತ್ತು ಸುರತ್ಕಲ್ ಬೀಚ್ ಸೇರಿದಂತೆ ಕಡಲತೀರಗಳಿಗೆ ತಾ. ೩೧ ರ ಮಧ್ಯಾಹ್ನದಿಂದ ಜ. ೨ ರ ಮಧ್ಯಾಹ್ನದವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದರೆ, ಸಾಂಪ್ರದಾಯಿಕ ಮೀನುಗಾರರಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ವಿಶೇಷವಾಗಿ ಹೊಸ ವರ್ಷದ ಮುನ್ನಾದಿನದಂದು ಕಡಲತೀರಗಳಿಗೆ ಜನರ ಹರಿವು ತಡೆಯಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ, ತಾ. ೩೧ ಮತ್ತು ಜನವರಿ ೧ ರಂದು ಜನಸಾಮಾನ್ಯರು ಮತ್ತು ಪ್ರವಾಸಿಗರು ಜಲಮೂಲಗಳಿಗೆ ಪ್ರವೇಶಿಸುವುದನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕೋವಿಡ್-೧೯ ನಿಯಂತ್ರಣ ೨೦೨೦ ಮತ್ತು ಸಿಆರ್‌ಪಿಸಿಯ ಸೆಕ್ಷನ್ ೧೪೪(೩)ರ ಅಡಿ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ, ಹನೂರು ತಾಲೂಕಿನ ಹೊಗೇನಕಲ್ ಜಲಪಾತಗಳು, ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ-ಸುವರ್ಣಾವತಿ ಜಲಾಶಯದಿಂದ ೫ ಕಿ.ಮೀ. ವ್ಯಾಪ್ತಿಯಲ್ಲಿ ಪ್ರವಾಸಿಗರ ಪ್ರವೇಶ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ

ಕೊರೊನಾಗೆ ಹೋಮಿಯೋಪತಿಯಲ್ಲೂ ಔಷಧಿ

ಬೆಂಗಳೂರು, ಡಿ. ೩೦: ಕೊರೊನಾ ನಿವಾರಣೆಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ ಆವಿಷ್ಕಾರ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಲಹೆ ನೀಡಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಹೋಮಿಯೋಪತಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಸಂಶೋಧನೆಗಳು ಕಡಿಮೆಯಾಗಿವೆ. ಎಲ್ಲವನ್ನೂ ಬೇರೆ ದೇಶಗಳಿಂದ ತರಿಸಿಕೊಳ್ಳುವಂತಾಗಿದೆ. ಕೊರೊನಾ ನಿಯಂತ್ರಣಕ್ಕೆ ತರಲು ಆರ್ಸೆನಿಕ್ ಆಲ್ಬಂ ಎಂಬ ಹೋಮಿಯೋಪತಿ ಔಷಧಿ ಬಳಕೆಯಲ್ಲಿದೆ. ಆದರೆ ಕೊರೊನಾ ನಿವಾರಣೆಗೆ ಬೇರೆ ಸಂಸ್ಥೆಗಳು ಔಷಧಿ ತಯಾರಿಸುತ್ತಿರುವಂತೆ ಹೋಮಿಯೋಪತಿಯಲ್ಲೂ ಔಷಧಿ ಕಂಡುಹಿಡಿಯಬೇಕು ಎಂದರು. ಹೋಮಿಯೋಪತಿ ಪದ್ಧತಿ ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ತತ್ವವನ್ನು ಆಧರಿಸಿದೆ. ಟೈಫಾಯಿಡ್ ಬಂದಾಗಲೂ ಹೋಮಿಯೋಪತಿ ಬಳಕೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಆಯುಷ್‌ಗೆ ವಿಶೇಷ ಒತ್ತು ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ಆಯುಷ್ ವೈದ್ಯರನ್ನು ನಿಯೋಜಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.

ಪಿ. ರವಿಕುಮಾರ್ ನೂತನ ಮುಖ್ಯ ಕಾರ್ಯದರ್ಶಿ

ಬೆಂಗಳೂರು, ಡಿ. ೩೦: ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಪಿ. ರವಿಕುಮಾರ್ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಹಾಲಿ ಮುಖ್ಯ ಕಾರ್ಯದರ್ಶಿಯಾಗಿರುವ ಟಿ.ಎಂ. ವಿಜಯ್ ಭಾಸ್ಕರ್ ಅವರು ಡಿಸೆಂಬರ್ ೩೧ಕ್ಕೆ ನಿವೃತ್ತಿ ಹೊಂದುತ್ತಿದ್ದು, ಅವರ ಸ್ಥಾನಕ್ಕೆ ೧೯೮೪ನೇ ಬ್ಯಾಚ್ ಐಎಎಸ್ ಅಧಿಕಾರಿ ರವಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ರವಿಕುಮಾರ್ ಅವರು ಕರ್ನಾಟಕ ಕೇಡರ್‌ನ ಎರಡನೇ ಅತಿ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ. ಸೇವಾ ಹಿರಿತನದ ಜೊತೆಗೆ ಆಡಳಿತಾಧಿಕಾರಿಯಾಗಿ ಉತ್ತಮ ಗೌರವ, ಸ್ಥಾನಮಾನ, ವಿಶ್ವಾಸಗಳಿಸಿಕೊಂಡಿರುವ ರವಿ ಕುಮಾರ್ ಅವರು, ಕೊರೊನಾ ಲಾಕ್‌ಡೌನ್ ನಂತರ ರಾಜ್ಯದ ಹಣಕಾಸು ಸ್ಥಿತಿಗತಿ ಹದಗೆಟ್ಟಿರುವ ಸವಾಲಿನ ಸಮಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳುತ್ತಿದ್ದಾರೆ.

ರಾಮ ಟ್ರಸ್ಟ್ನಲ್ಲಿ ಕಳವು ಮಾಡಿದವರ ಬಂಧನ

ಅಯೋಧ್ಯೆ, ಡಿ. ೩೦: ರಾಮಜನ್ಮಭೂಮಿ ಟ್ರಸ್ಟ್ನಿಂದ ೬ ಲಕ್ಷ ರೂಪಾಯಿ ದೋಚಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಸೆ. ೯ ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಅಯೋಧ್ಯೆಯ ಎಸ್‌ಎಸ್‌ಪಿ ದೀಪಕ್‌ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಮ ಜನ್ಮಭೂಮಿ ಟ್ರಸ್ಟ್ನಿಂದ ೬ ಲಕ್ಷ ರೂಪಾಯಿ ಕಳುವಾಗಿರುವ ಬಗ್ಗೆ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ನೀಡಿದ್ದ ದೂರಿನ ಆಧಾರದಲ್ಲಿ ಸೆ. ೯ ರಂದು ಪ್ರಕರಣ ದಾಖಲಿಸಲಾಗಿತ್ತು. ಎಎಸ್‌ಪಿ ನೇತೃತ್ವದ ತಂಡ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದವರ ಪೈಕಿ ನಾಲ್ವರನ್ನು ಬಂಧಿಸಿದ್ದು, ಉಳಿದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.