ಕುಶಾಲನಗರ, ಡಿ. ೩೦: ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಶಾಲನಗರದ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ವಿ.ಬೋರೇಗೌಡ (೫೫) ಎಂಬವರು ಮೃತಪಟ್ಟ ಅಧಿಕಾರಿ. ಬೆಳಗ್ಗೆ ತನ್ನ ಕಾರಿನಲ್ಲಿ ಕರ್ತವ್ಯಕ್ಕೆ ತೆರಳಿದ ಬೋರೇಗೌಡ ಅವರು ಪಿರಿಯಾಪಟ್ಟಣದ ಮತ ಎಣಿಕೆ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ಮೈಸೂರಿಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ಬೋರೇಗೌಡ ಅವರು ಸೋಮವಾರಪೇಟೆ, ಕುಶಾಲನಗರದಲ್ಲಿ ಎರಡು ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ನಂತರ ಪದೋನ್ನತಿ ಹಿನ್ನಲೆಯಲ್ಲಿ ಪಿರಿಯಾಪಟ್ಟಣಕ್ಕೆ ವರ್ಗಾವಣೆಯಾಗಿದ್ದರು. ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆ ನಿವಾಸಿಯಾಗಿರುವ ಬೋರೇಗೌಡ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.