ಕಣಿವೆ, ಡಿ. ೩೦: ಹಾರಂಗಿ ಜಲಾಶಯವೀಗ ಬಟಾ ಬಯಲಿನಂತಾಗಿದೆ. ಅಂದರೆ ಮಳೆಗಾಲದಲ್ಲಿ ಜಲಾಶಯಕ್ಕೆ ಹರಿದು ಬಂದು ಸಂಗ್ರಹಣೆಗೊAಡಿದ್ದ ನೀರೆಲ್ಲಾ ಖಾಲಿಯಾದ ಪರಿಣಾಮ ಜಲಾಶಯದ ಹಿನ್ನೀರು ಪ್ರದೇಶ ಬಯಲಿನಂತಾಗಿದೆ. ಜಲಾಶಯದ ಹಿನ್ನೀರು ತೀರದ ಹರದೂರು ಸೇತುವೆ ಎರಡೂ ಕಡೆಗಳಲ್ಲಿ ನದಿ ತೀರ ಬೋಳು ಬೋಳಾಗಿ ಕಾಣುವ ಚಿತ್ರಣ ನೋಡುಗರಿಗೆ ಬೇಸರ ಮೂಡಿಸುತ್ತದೆ. ಬೇಸಿಗೆಯ ಬಿಸಿಲ ಛಾಯೆ ಇಲ್ಲಿ ಎದ್ದು ಕಾಣುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಹಾರಂಗಿ ಹಿನ್ನೀರು ಪ್ರದೇಶದ ಹಟ್ಟಿಹೊಳೆ ಜಲಾನಯನ ವ್ಯಾಪ್ತಿಯಲ್ಲಿ ಜಲಪ್ರಳಯದಿಂದ ಭಾರೀ ಪ್ರಮಾಣದ ಮಣ್ಣು ಜಲರಾಶಿಯೊಳಗೆ ಹರಿದು ಬಂದ ಕಾರಣ ಈ ಬೋಳಾದ ನದಿಯಲ್ಲಿ ಇದೀಗ ಮಣ್ಣಿನ ರಾಶಿ ಕಾಣುತ್ತದೆ.
ಇನ್ನೊಂದೆಡೆ ಹರದೂರು ಹಿನ್ನೀರು ಪ್ರದೇಶದ ಹಾರಂಗಿ ಹಾಗೂ ಹಟ್ಟಿಹೊಳೆಗಳಲ್ಲಿ ಮಳೆಗಾಲದಲ್ಲಿ ತೇಲಿ ಬರುವ ಬೃಹತ್ ಗಾತ್ರದ ಮರಗಳು, ದಿಮ್ಮಿಗಳು ಹಾಗೂ ಬೇರುಗಳು ಸೇತುವೆಯ ಬಳಿ ಸಂಗ್ರಹವಾಗುವುದರಿAದ ನೀರು ಬರಿದಾಗುವುದನ್ನೇ ಎದುರು ನೋಡುವ ಸುತ್ತಲಿನ ಹಲವು ಜನ ಮನೆಗಳಿಗೆ ಕಟ್ಟಿಗೆಗಳಾಗಿ ಉಪಯೋಗಿಸಲು ಈ ಮರಗಳನ್ನು ಆಯ್ದು ರಾಶಿ ಹಾಕಿ ವಾಹನಗಳಲ್ಲಿ ಮನೆಗಳಿಗೆ ಕೊಂಡೊಯ್ದು ಮನೆ ಹಿಂಬದಿಯ ಅದೇ ನದಿ ದಂಡೆಯಲ್ಲಿ ಶೇಖರಿಸುತ್ತಾರೆ. ಆದರೆ ಮತ್ತೆ ಮುಂದಿನ ಮಳೆಗಾಲದಲ್ಲಿ ಅದೇ ಸೌದೆಗಳು ಮತ್ತೆ ನದಿಯ ಪ್ರವಾಹಕ್ಕೆ ಸಿಲುಕಿ ಮತ್ತೆ ಇದೇ ಸೇತುವೆ ಬಳಿಯೇ ಬಂದು ಸೇರುವ ಪ್ರಸಂಗಗಳು ಘಟಿಸುತ್ತವೆ ಎಂದಿರುವ ಹರದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ನದಿ ದಂಡೆಯ ನಿವಾಸಿಗಳು ನದಿ ಪ್ರವಾಹದ ಸ್ಥಳಗಳಲ್ಲಿ ಯಾರೂ ಕೂಡ ಈ ಸೌದೆಗಳನ್ನು ಸಂಗ್ರಹಿಸಿಡಬಾರದು ಎಂದು ಮನವಿ ಮಾಡಿದ್ದಾರೆ. ಮಳೆಗಾಲದ ಆ ದಿನಗಳಲ್ಲಿ ನೋಡುಗರ ಕಣ್ಣುಗಳಿಗೆ ಹಿತ ನೀಡುವ ಹರದೂರು ಸೇತುವೆ ಈಗ ಬೇಸರ ಮೂಡಿಸುತ್ತಿದೆ. - ಮೂರ್ತಿ