‘ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವುದೋ’ ಅಂಥ ಜ್ಞಾನವನ್ನು ಪಡೆದವರು ಶ್ರೀ ರಾಮಕೃಷ್ಣ ಪರಮಹಂಸರು. ಜನವರಿ ೧ ಬಂತೆAದರೆ, ಇಡೀ ಜಗವೇ ಹೊಸ ವರ್ಷದ ಸಂಭ್ರಮದಲ್ಲಿರುತ್ತದೆ. ಆದರೆ ಜ. ೧ ಶ್ರೀ ರಾಮಕೃಷ್ಣ ಪರಮಹಂಸರ ನೆನಪಿನಲ್ಲಿ ನಡೆವ ‘ಕಲ್ಪತರು ದಿನ’. ೧೮೮೬ರ ಜ. ೧ ರಂದು ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಗೃಹಸ್ಥ ಭಕ್ತರಿಗೆಲ್ಲ ಅವರು ಕೇಳಿದ್ದನ್ನೆಲ್ಲ ಕೊಟ್ಟ ದಿನ. ಹೀಗಾಗಿ ಈ ದಿನ ಕೇಳಿದ್ದನ್ನೆಲ್ಲ ಕರುಣಿಸುವ ‘ಕಲ್ಪತರು ದಿನ’ವಾಗಿದೆ. ವಾಸ್ತವವಾಗಿ ಅವರ ಜನ್ಮದಿನ ಫೆಬ್ರವರಿಯಲ್ಲಿ ಇದ್ದರೂ (ಫೆ. ೧೮, ೧೮೩೬) ಈಗ ‘ಕಲ್ಪತರು ದಿನ’ವೇ ಮಹತ್ವದ ಆಚರಣೆಯಾಗಿದೆ.

ಶ್ರೀ ರಾಮಕೃಷ್ಣ ಪರಮಹಂಸರು ಭಾರತೀಯ ಧರ್ಮದ ವಿವಿಧ ಮತಗಳಾದ ಶಾಕ್ಯ, ವೈಷ್ಣವ, ತಂತ್ರ ಮುಂತಾದ ಮತಗಳ ಸಾಧನೆ ಮಾಡಿ ದೇವರ ದರ್ಶನವನ್ನು ಪಡೆದರು. ಶಾಸ್ತçಗಳು ಬರಿಯ ಪುಸ್ತಕಗಳು, ಬೌದ್ಧಿಕ ವಿಚಾರಗಳಲ್ಲದೆ, ಋಷಿಮುನಿಗಳ ಅನುಭವಗಳು, ಅವು ಸತ್ಯ ಎಂದು ನಮಗೆ ಹಾಗೂ ವಿಶ್ವಕ್ಕೆ ಮನಗಾಣಿಸಿದರು. ಧರ್ಮ-ಅಧ್ಯಾತ್ಮಗಳಿಗೆ ತಮ್ಮ ಸಾಧನೆ-ತಪಸ್ಸಿನಿಂದ ನವಚೇತನವನ್ನು ತುಂಬಿದರು. ಅನ್ಯದೇಶದ ಧರ್ಮಗಳ ಸಾಧನೆಯನ್ನು ಮಾಡಿದರು ಶ್ರೀ ರಾಮಕೃಷ್ಣರು. ವಿವಿಧ ಕಠೋರ ಸಾಧನೆಗಳನ್ನು ಮಾಡಿ, ತಪಸ್ಸಿನ ಫಲವನ್ನು, ತಾವು ಕಂಡ ಸತ್ಯವನ್ನು ಆಧ್ಯಾತ್ಮಿಕ ಪಿಪಾಸುಗಳಿಗೆ ಉಣಬಡಿಸಿದರು.

ಶ್ರೀ ರಾಮಕೃಷ್ಣ ಪರಮಹಂಸರು ಭಾರತೀಯ ಅಧ್ಯಾತ್ಮ ಪರಂಪರೆಯ ಅತಿ ವಿಶಿಷ್ಟ ಸೃಷ್ಟಿ. ಹೊಸಕಾಲದ ಶಿಕ್ಷಣ ಒಗ್ಗದಿದ್ದಾಗ ಅವರು ಜೀವನೋಪಾಯಕ್ಕಾಗಿ ಅರ್ಚಕರಾದರು. ಆದರೆ ಅಲ್ಲಿ ಅವರು ಹೊರಟಿದ್ದು ಪರಮಸತ್ಯದ ಶೋಧನೆಗೆ; ಇದಕ್ಕೆ ಅವರ ಅಂತರAಗವೇ ಪ್ರಯೋಗಶಾಲೆ. ಅಂತಿಮವಾಗಿ ಅವರು ‘ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವುದೋ’ ಅಂಥ ಜ್ಞಾನವನ್ನು ಪಡೆದರು. ಇಷ್ಟೇ ಅಲ್ಲ, ಒಂದು ಇಡೀ ಯುಗ ಚಲಿಸುತ್ತಿದ್ದ ದಿಕ್ಕನ್ನೇ ಬದಲಿಸಿದರು; ಆ ಯುಗ ಬೆಳೆಸುತ್ತಿದ್ದ ಚಿಂತನೆಯನ್ನೇ ಬುಡಮೇಲು ಮಾಡಿದರು. ಭಕ್ತಿ, ಶ್ರದ್ಧೆ, ವ್ಯಾಕುಲತೆ ಇದ್ದರೆ ಎಲ್ಲವನ್ನೂ ಪಡೆಯಬಲ್ಲಿರಿ ಎಂದು ಸಾಧಿಸಿ ತೋರಿಸಿದರು. ಹೀಗಾಗಿಯೇ ಶ್ರೀ ರಾಮಕೃಷ್ಣ ಪರಮಹಂಸರು ನಿಜಾರ್ಥದಲ್ಲಿ ಯುಗಾವತಾರಿ.

೧೮೮೬ರ ಜ. ೧ ಪರಮಹಂಸರ ಆತ್ಮಪ್ರಕಾಶದ ದಿನ. ಅವತ್ತು ಅವರು ತಮ್ಮ ನಿಜಸ್ವರೂಪವನ್ನು ಪ್ರಕಟಿಸಿದರು. ಗುರುಕರುಣೆ, ಪತಿತ ಪಾವನರೆಂದು ತಾರತಮ್ಯ ಮಾಡದೆ ಪ್ರತಿಯೊಬ್ಬರಿಗೂ ಪರಮಾನುಗ್ರಹ ನೀಡಿದ ಅಪರೂಪದ ಸಂದರ್ಭವಿದು. ಇದರ ನೆನಪಿಗೆ ಅವರ ಶಿಷ್ಯರಲ್ಲಿ ಒಬ್ಬರಾದ ರಾಮಚಂದ್ರ ದತ್ತ ಮೊದಲಿಗೆ "ಕಲ್ಪತರು ದಿನ"ದ ಆಚರಣೆ ಆರಂಭಿಸಿದ. ಈಗ ಅದು ಬೃಹದಾಚರಣೆಯಾಗಿ ಬೆಳೆದಿದೆ. ರಾಮಕೃಷ್ಣರು ತಮ್ಮ ಈ ದಿವ್ಯತ್ವವನ್ನು ತೋರಿದ ಕಾಶೀಪುರದ ಉದ್ಯಾನದಲ್ಲಂತೂ ಈ ದಿವಸ ಬಂತೆAದರೆ, ಲಕ್ಷಾಂತರ ಜನ ಸೇರುತ್ತಾರೆ. ಈಗ ಅಲ್ಲೊಂದು ರಾಮಕೃಷ್ಣ ಮಠವೂ ಇದೆ.

ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯುಂಟಾಗುತ್ತದೆಯೋ ಮತ್ತು ಅಧರ್ಮವು ಹೆಚ್ಚುತ್ತದೆಯೋ ಅಂತಹ ಸಮಯದಲ್ಲಿ ನಾನೇ ಮತ್ತೆ ಅವತಾರ ಮಾಡುತ್ತೇನೆ’ ಎನ್ನುತ್ತಾನೆ ಭಗವಾನ್ ಶ್ರೀ ಕೃಷ್ಣ. ಕಲಿಯುಗದಲ್ಲಿ ೧೯ನೆಯ ಶತಮಾನದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಜನ್ಮವೆತ್ತಿ ಧರ್ಮವನ್ನು ರಕ್ಷಿಸಿದರು. ಅವರ ಅವತಾರಕಾರ್ಯದಲ್ಲಿ ಕಲ್ಪತರುವಾಗಿ, (ಬೇಡಿದ್ದನ್ನು ಕೊಡುವುದು ಎಂದು) ಭಕ್ತರ ಮನೋಕಾಮನೆಗಳನ್ನು, ಆಧ್ಯಾತ್ಮಿಕ ಜಾಗೃತಿಯನ್ನು ಸಾರ್ವತ್ರಿಕವಾಗಿ ಕರುಣಿಸಿದ ಸುದಿನ.

- ಕಾನತ್ತಿಲ್ ರಾಣಿ ಅರುಣ್, ಮಡಿಕೇರಿ.