ಮಡಿಕೇರಿ, ಡಿ.೩೦: ಮಡಿಕೇರಿ ತಾಲೂಕು ಗ್ರಾಮ ಪಂಚಾಯ್ತಿಗಳ ಮತ ಎಣಿಕೆ ಪ್ರಕ್ರಿಯೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಡೆಯಿತು. ಮತ ಎಣಿಕೆ ಹಿನ್ನೆಲೆಯಲ್ಲಿ ಸಂತ ಜೋಸೆಫರ ಕಾನ್ವೆಂಟ್ ಶಾಲಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಕೂರ್ಗ್ ಇಂಟರ್ ನ್ಯಾಷನಲ್ ಹೊಟೇಲ್ ಬಳಿಯಿಂದಲೇ ಕಾನ್ವೆಂಟ್‌ನತ್ತ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಇರಲಿಲ್ಲ. ಅಭ್ಯರ್ಥಿಗಳು, ಬೆಂಬಲಿಗರಿಗೆ ಕಾನ್ವೆಂಟ್ ಶಾಲಾ ಹಿಂಭಾಗದಿAದ ಅಲ್ಲಿನ ಮೈದಾನದವರೆಗೆ ಬರಲು ಅವಕಾಶ ಕಲ್ಪಿಸಲಾಗಿತ್ತು. ಶಾಲಾ ಮುಖ್ಯ ದ್ವಾರದಿಂದ ಅನತಿ ದೂರದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಲ್ಲಿಯೇ ಅಭ್ಯರ್ಥಿಗಳು, ಬೆಂಬಲಿಗರಿಗೆ ತಡೆಯೊಡ್ಡಲಾಗಿತ್ತು. ಮತ ಎಣಿಕೆ ನಡೆಯುತ್ತಿದ್ದ ವೇಳೆ ಆಯಾ ಕ್ಷೇತ್ರಗಳ ಅಭ್ಯರ್ಥಿ, ಏಜೆಂಟರುಗಳನ್ನು ಮೈಕ್ ಮೂಲಕ ಆಹ್ವಾನಿಸಲಾಗುತಿತ್ತು. ಈ ಸಂದರ್ಭ ಅವರುಗಳನ್ನು ಮಾತ್ರ ಪೊಲೀಸರು ಮತ ಎಣಿಕಾ ಕೇಂದ್ರದ ಒಳಗೆ ಬಿಡುತ್ತಿದ್ದರು. ಉಳಿದಂತೆ ಯಾರನ್ನು ಮತ ಎಣಿಕಾ ಕೇಂದ್ರದ ಒಳಗೆ ಬಿಡುತ್ತಿರಲಿಲ್ಲ. ಓರ್ವ ಡಿವೈಎಸ್ಪಿ, ಇಬ್ಬರು ಪ್ರೊಬೆಷನರಿ ಡಿವೈಎಸ್ಪಿಗಳು, ಮೂವರು ವೃತ್ತ ನಿರೀಕ್ಷಕರು, ಎಂಟು ಉಪ ನಿರೀಕ್ಷರು, ಓರ್ವ ಆರ್‌ಪಿಐ, ನೂರೈವತ್ತು ಪೇದೆಗಳನ್ನು ಒಳಗೊಂಡು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಬಿಸಿಲಲ್ಲೂ ಬಾಡದ ಉತ್ಸಾಹ!
ಮತ ಎಣಿಕೆ ಪ್ರಕ್ರಿಯೆ ವೇಳೆ ಕಾನ್ವೆಂಟ್ ಶಾಲೆಯ ಬಲಭಾಗದ ಮೈದಾನದ ಬಳಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಸಮೀಪ ಜಮಾಯಿಸಿದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಉರಿ ಬಿಸಿಲಿನ ನಡುವೆಯೆ ಫಲಿತಾಂಶಕ್ಕಾಗಿ ಕಾದು ನಿಂತಿದ್ದರು. ಮತ ಎಣಿಕೆಗೆ ಕರೆ ಬರುತ್ತಿದ್ದಂತೆ ಹುಮ್ಮಸ್ಸಿನಿಂದ ತೆರಳುತ್ತಿದ್ದ ಅಭ್ಯರ್ಥಿಗಳಲ್ಲಿ ಗೆದ್ದವರು ಅದೇ ಹುಮ್ಮಸ್ಸಿನೊಂದಿಗೆ ಹಿಂತಿರುಗಿದರೆ, ಸೋತವರು ಸಪ್ಪೆ ಮೋರೆಯೊಂದಿಗೆ ತೆರಳುತ್ತಿದ್ದುದು ಕಂಡು ಬಂತು. ಕಾನ್ವೆಂಟ್ ಮೈದಾನದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತಾದರೂ ಫಲಿತಾಂಶದ ಕುತೂಹಲದೊಂದಿಗೆ ಅಭ್ಯರ್ಥಿಗಳು ಬೆಂಬಲಿಗರು ಮತ ಎಣಿಕಾ ಕೇಂದ್ರದ ಬಳಿ ಬಿಸಿಲಿನ ನಡುವೆ ನಿಂತು ಕಾಯುತ್ತಿದ್ದರು.