ಮಡಿಕೇರಿ, ಡಿ. ೩೦: ರಾಷ್ಟçಕವಿ, ವಿಶ್ವ ಮಾನವ ಕುವೆಂಪು ಅವರು ಆಂಗ್ಲ ಭಾಷೆಯ ಪ್ರಸಿದ್ಧ ಕವಿ ಶೇಕ್ಸ್ಪಿಯರ್ ಅವರನ್ನು ಕೂಡ ಮೀರಿಸಿದವರು. ಅವರ ಸಾಹಿತ್ಯವನ್ನು ಕನ್ನಡಿಗರು ಅಭ್ಯಸಿಸಬೇಕಿದೆ ಎಂದು ರಾಜ್ಯದ ಹಿರಿಯ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರು ನುಡಿದರು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಕುವೆಂಪು ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ ಆನ್ಲೈನ್ ಗೀತ ಗಾಯನ ಕಾರ್ಯಕ್ರಮವನ್ನು ಕುವೆಂಪು ರಚಿತ ಗೀತೆಯನ್ನು ಹಾಡುವ ಮೂಲಕ ಉದ್ಘಾಟಿಸಿದರು. ಮುಂದುವರೆದು ದೇಶಕ್ಕೆ ರಾಷ್ಟçಗೀತೆಯನ್ನು ನೀಡಿದಂತಹ ರವೀಂದ್ರನಾಥ್ ಟಾಗೋರ್ ಅವರ ಹಾಗೆ ಕನ್ನಡಕ್ಕೆ ನಾಡಗೀತೆಯನ್ನು ನೀಡಿದಂತಹ ಕುವೆಂಪು ಅವರು ಸರ್ವ ಮಾನ್ಯರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕುವೆಂಪು ಅವರ ಜೀವನ ಮತ್ತು ಸಾಹಿತ್ಯದ ಬಗ್ಗೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಹಿರಿಯ ಸಾಹಿತಿಯಾದಂತಹ ಉಪನ್ಯಾಸಕಿ ಎಂ.ಬಿ. ತಿಲೋತ್ತಮೆ ಮಾತನಾಡಿ, ಕುವೆಂಪು ಸಾಹಿತ್ಯ ಲೋಕದ ದೈತ್ಯ ಪ್ರತಿಭೆ. ಶ್ರೀ ರಾಮಾಯಣ ದರ್ಶನಂ ಎಂಬ ಮೇರು ಕೃತಿಯಲ್ಲಿ ಈಗಿನ ಕಾಲಕ್ಕೆ ಬೇಕಾದಂತಹ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ ಎಂದು ನುಡಿದರು.
ಗೀತ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ಗಾಯಕರು ಕುವೆಂಪು ರಚಿತ ಗೀತೆಯನ್ನು ಹಾಡುವ ಮೂಲಕ ಜನಮೆಚ್ಚುಗೆಯನ್ನು ಗಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಎ. ಷಂಶುದೀನ್, ಬಳಗದ ನಿರ್ದೇಶಕ ಪ್ರೇಮ್ಕುಮಾರ್, ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್ ಹಾಜರಿದ್ದರು.
ಕಾರ್ಯಕ್ರಮವನ್ನು ಬಳಗದ ಹಿರಿಯ ನಿರ್ದೇಶಕ ಮುನೀರ್ ಅಹ್ಮದ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ವಂದಿಸಿದರು. ಬಳಗದ ಉಪಾಧ್ಯಕ್ಷೆ ರೇವತಿ ರಮೇಶ್ ಅವರ ತಂಡ ನಾಡಗೀತೆ ಹಾಡಿದರು.
ಕುವೆಂಪುರವರ ಜನ್ಮ ದಿನದ ಪ್ರಯುಕ್ತ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪರವಾಗಿ ಮಡಿಕೇರಿಯ ಕುವೆಂಪು ಪುತ್ಥಳಿಗೆ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್, ನಿರ್ದೇಶಕ ಮುನೀರ್ ಅಹಮದ್, ಮಡಿಕೇರಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ ಮತ್ತು ಸಂಗೀತ ಕಾಮತ್ ಇವರು ಮಾಲಾರ್ಪಣೆ ಮಾಡುವ ಮೂಲಕ ಮಡಿಕೇರಿಯ ಚಿಕ್ಕಪೇಟೆಯಲ್ಲಿ ಇರುವಂತಹ ಕುವೆಂಪು ಪುತ್ಥಳಿಗೆ ಗೌರವ ಸಲ್ಲಿಸಿದರು.