ಗೋಣಿಕೊಪ್ಪಲು, ಡಿ. ೨೮: ಗ್ರಾಮ ಪಂಚಾಯಿತಿಗೆ ನಡೆದ ೨ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದ್ದು ಇದೀಗ ಫಲಿತಾಂಶಕ್ಕಾಗಿ ತಾ. ೩೦ ರವರೆಗೆ ಅಭ್ಯರ್ಥಿಗಳು ಕಾಯಬೇಕಾಗಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ೩೫ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ೯೨೪ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ೩೬೬ ಸ್ಥಾನಗಳು ಆಯ್ಕೆಯಾಗಬೇಕಾಗಿದೆ. ಇದೀಗ ಸೋಲು, ಗೆಲುವಿನ ಲೆಕ್ಕಾಚಾರ ಶುರುವಾಗಿದ್ದು, ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂಬ ಆತ್ಮವಿಶ್ವಾಸದಲ್ಲಿ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದಾರೆ. ಮತದಾರರ ಪಟ್ಟಿ ಹಿಡಿದುಕೊಂಡು ಮತ ಲೆಕ್ಕಾಚಾರವನ್ನು ಕೂಡುವುದು, ಕಳೆಯುವುದು ಮಾಡುತ್ತಿದ್ದಾರೆ.

ರಾಜಕೀಯ ರಹಿತ ‘ಸ್ವತಂತ್ರ’ ಚುನಾವಣೆಯಾಗಿದ್ದರೂ, ವಿವಿಧ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ನಿಗದಿತ ಪಂಚಾಯಿತಿಗಳ ಉಸ್ತುವಾರಿ ವಹಿಸಿಕೊಂಡು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾಜಕೀಯ ತಂತ್ರಗಾರಿಕೆ ವಿಶೇಷವಾಗಿ ನಡೆಸಿದ್ದರು. ಮುಂದಿನ ಚುನಾವಣೆಯಲ್ಲಿ ತಮ್ಮ ಸ್ಥಾನಗಳನ್ನು ಭದ್ರಮಾಡಿಕೊಳ್ಳಲು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ತಮ್ಮ ತಮ್ಮ ವಾರ್ಡ್ನಲ್ಲಿ ಹೆಚ್ಚು ಮತಗಳು ಬರುವಂತೆ ತಯಾರಿ ನಡೆಸಿದ್ದರು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದರು. ಹಲವೆಡೆ ಪಕ್ಷೇತರರು ಹೆಚ್ಚಾಗಿ ಸ್ಪರ್ಧಿಸಿದ್ದರು. ಹಲವು ಪಂಚಾಯಿತಿಗಳಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹುರಿಯಾಳುಗಳು ಗೆಲುವು ಸಾಧಿಸಲೇಬೇಕೆಂಬ ಹಠಕ್ಕೆ ಬಿದ್ದು ಲಕ್ಷಾಂತರ ಹಣವನ್ನು ಚುನಾವಣೆ ಗೆಲುವಿಗಾಗಿ ವ್ಯಯ ಮಾಡಿದ್ದಾರೆ. ‘ಮಿಡ್‌ನೈಟ್ ಪಾರ್ಟಿ’ಗಳು ನಡೆದಿವೆ. ಜಾತಿ, ಹಣ, ಪಕ್ಷಗಳ ಬೆಂಬಲ, ಇವೆಲ್ಲವೂ ಪಂಚಾಯಿತಿ ಚುನಾವಣೆಯಲ್ಲಿ ಈ ಹಿಂದಿನಿAದಲೂ ಪ್ರಭಾವ ಬೀರಿದೆ. ಕೆಲವು ಪಂಚಾಯಿತಿಗಳಲ್ಲಿ ತಮ್ಮ ಸ್ವ ಪ್ರತಿಷ್ಠೆಗಳನ್ನು ಪಣಕ್ಕಿಟ್ಟ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಮತದಾನದ ಹಿಂದಿನ ದಿನ ಲಕ್ಷ ಲಕ್ಷ ಹಣವನ್ನು ಸುರಿಯುವ ಮೂಲಕ ಗೆದ್ದೇ ತೀರುವ ಹಠಕ್ಕೆ ಬಿದ್ದಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ವೈಯಕ್ತಿಕ ವರ್ಚಸ್ಸು, ವ್ಯಕ್ತಿತ್ವ ಕೂಡ ನಿರ್ಣಾಯಕವಾಗಲಿದೆ. ವಿವಿಧ ಪಂಚಾಯಿತಿಯಲ್ಲಿ ೫೪ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯುವ ಜನತೆ, ವಿದ್ಯಾವಂತರು, ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳಾಗಿ ಅಖಾಡಕ್ಕೆ ಇಳಿದಿದ್ದಾರೆ. ಉಳಿದ ಚುನಾವಣೆಗಳಿಗಿಂತ ಕಡಿಮೆ ಇಲ್ಲದಂತೆ ಪಂಚಾಯಿತಿ ಚುನಾವಣೆ ತೀವ್ರ ಪೆೆÊಪೋಟಿಯಿಂದ ನಡೆದಿವೆ. ಹಣಕಾಸಿನ ಮುಗ್ಗಟ್ಟಿನ ನಡುವೆ ಮತದಾರರಿಗೆ ಆಮಿಷಗಳು ಸದ್ದಿಲ್ಲದೆ ನಡೆದಿವೆ. ಪ್ರತಿ ಮತದಾರರನ್ನು ಮತ ಕೇಂದ್ರಕ್ಕೆ ಕರೆ ತರುವ ಕಾರ್ಯದಲ್ಲಿ ಸ್ವತಃ ಅಭ್ಯರ್ಥಿಗಳೇ ಹೆಚ್ಚಿನ ನಿಗಾವಹಿಸಿರುವುದು ಶೇಕಡವಾರು ಮತದಾನವಾಗಲು ಕಾರಣವಾಗಿದೆ. ಕೊರೊನಾ ಹಾವಳಿಯ ನಡುವೆ ಗ್ರಾಮೀಣ ಭಾಗದ ಜನತೆಗೆ ಸಂಪನ್ಮೂಲ ಹರಿದುಹೋಗಿದೆ. ಚುನಾವಣೆಯಲ್ಲಿ ಮತದಾನಕ್ಕೆ ಹೆಚ್ಚಾಗಿ ಮಹಿಳೆಯರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಕೆಲವೆಡೆ ಸಣ್ಣಪುಟ್ಟ ಗೊಂದಲ, ಗಲಾಟೆ ಹೊರತುಪಡಿಸಿ ಉಳಿದೆಡೆ ಶಾಂತಿಯುತ ಮತದಾನ ನಡೆಯಿತು. ವಯೋವೃದ್ಧರು, ವಿಶೇಷಚೇತನರು ಮತದಾನದಲ್ಲಿ ಭಾಗವಹಿಸಿದ್ದರು. -ಹೆಚ್.ಕೆ. ಜಗದೀಶ್