ಮಡಿಕೇರಿ, ಡಿ. ೨೮: ರಾಜ್ಯದಲ್ಲಿ ಕೊರೊನಾ ವೈರಸ್ ಹರದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರದ ಆದೇಶದಂತೆ ಮುಂಬರುವ ದಿನಗಳಲ್ಲಿ ಆಚರಿಸಲ್ಪಡುವ ಹೊಸ ವರ್ಷಾಚರಣೆ ಸಂಬAಧ ಕೋವಿಡ್-೧೯ ನಿಯಂತ್ರಣದ ಕುರಿತಾಗಿ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಈಶ್ವರ್ ಕುಮಾರ್ ಖಾಂದೂ ಅವರು ತಿಳಿಸಿದ್ದಾರೆ.

ಹೊಸ ವರ್ಷದ ಆಚರಣೆ ಸಮಯದಲ್ಲಿ ಕೋವಿಡ್-೧೯ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಸ್ತಲಾಘವ ಮತ್ತು ಆಲಿಂಗನವನ್ನು ನಡೆಸಬಾರದು.

ತಾ. ೩೦ ರಿಂದ ೨೦೨೧ರ ಜನವರಿ, ೨ ರವರೆಗೆ ಜಿಲ್ಲೆಯಾದ್ಯಂತ ಹೊಟೇಲ್/ ರೆಸಾರ್ಟ್ ಮತ್ತು ಹೋಂ-ಸ್ಟೇಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ವಿಶೇಷ ಡಿ.ಜೆ-ಡ್ಯಾನ್ಸ್ ಕಾರ್ಯಕ್ರಮ, ವಿಶೇಷ ಪಾರ್ಟಿ ಮತ್ತಿತರವನ್ನು ನಿಷೇಧಿಸಲಾಗಿದೆ. ಆದರೆ ಹೊಟೇಲ್/ ರೆಸಾರ್ಟ್ ಮತ್ತು ಹೋಂ-ಸ್ಟೇಗಳನ್ನು ಪ್ರತಿನಿತ್ಯದಂತೆ ತೆರೆದಿದ್ದು, ಕೋವಿಡ್ ಮಾರ್ಗಸೂಚಿಯನ್ವಯ ಕಾರ್ಯ ಚಟುವಟಿಕೆ ನಡೆಸಲು ನಿರ್ಬಂಧ ಇರುವುದಿಲ್ಲ.

ಹೊಟೇಲ್/ ರೆಸಾರ್ಟ್ ಮತ್ತು ಹೋಂ-ಸ್ಟೇಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಹೊಸ ವರ್ಷಾಚರಣೆ ಸಂಬAಧ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದೆ.

ಮುಖಗವಸು ಧರಿಸುವುದು ಹಾಗೂ ಕನಿಷ್ಟ ೬ ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಕಡ್ಡಾಯವಾಗಿ ಪ್ರವಾಸಿಗರು/ಅತಿಥಿಗಳು ನೋಂದಣಿಯಾಗಿರುವ ಹೋಂ-ಸ್ಟೇಗಳಲ್ಲಿ ಮಾತ್ರ ವಾಸ್ತವ್ಯ ಹೂಡಬೇಕು. ಸರ್ಕಾರದ ಆದೇಶ/ಮಾರ್ಗಸೂಚಿ ಉಲ್ಲಂಘಿಸುವುದು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೮೮ರ ಅಡಿ ದಂಡನಾರ್ಹವಾಗಿರುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.