ಕೂಡಿಗೆ, ಡಿ. ೨೮: ಕೂಡಿಗೆ ವ್ಯಾಪ್ತಿಯ ಮದಲಾಪುರ- ಸೀಗೆ ಹೊಸೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟದ ಜೊತೆಗೆ ಗ್ರಾಮಸ್ಥರು ಸಂಚರಿಸಲು ಭಯಪಡುವ ಸ್ಥಿತಿ ಸೃಷ್ಟಿಯಾಗಿದೆ.
ಕಳೆದ ಮೂರು ದಿನಗಳಿಂದ ಸೀಗೆಹೊಸೂರು ಮಾರ್ಗವಾಗಿ ಬರುತ್ತಿರುವ ಕಾಡಾನೆಗಳ ಹಿಂಡು ಹಾರಂಗಿ ಅಚ್ಚುಕಟ್ಟು ಪ್ರದೇಶ ಮತ್ತು ಕಕ್ಕೆಹೊಳೆಯ ಅಚ್ಚುಕಟ್ಟು ಪ್ರದೇಶದ ಜಮೀನಿಗೆ ದಾಳಿ ಮಾಡಿ ಮುರುಗೇಶ್, ದಿನೇಶ್, ಅಪ್ಪಾಜಿ, ಕೃಷ್ಣ ಸೇರಿದಂತೆ ಅನೇಕ ರೈತರು ಬೆಳೆದಿದ್ದ ಕೃಷಿ ಫಸಲನ್ನು ನಷ್ಟಪಡಿಸಿವೆ. ಅಲ್ಲದೆ ಸಂಜೆ ಆರು ಗಂಟೆಗೆ ಮುಖ್ಯ ರಸ್ತೆಯಲ್ಲಿ ಕಾಣುವ ಕಾಡಾನೆ ಗಳಿಂದಾಗಿ ಈ ವ್ಯಾಪ್ತಿಯ ಭುವನಗಿರಿ, ಗಂಧದಹಾಡಿ, ಶಿರಹೊಳಲು, ಗಂಗೆ ಕಲ್ಯಾಣ ಗ್ರಾಮಗಳಿಗೆ ಹೋಗುವ ಗ್ರಾಮಸ್ಥರು ಭಯಪಡುತ್ತಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಬಾಣವಾರ ಮೀಸಲು ಅರಣ್ಯದ ಕಡೆಗೆ ಓಡಿಸಲು ಮುಂದಾಗಬೇಕೆAಬದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.