ನಾಪೋಕ್ಲು, ಡಿ. ೨೮: ನೆರೆಮನೆಯವರ ಮದುವೆ ಸಮಾರಂಭಕ್ಕೆ ತೆರಳಿ ಭಾಗವಹಿಸಿ ಹಿಂತಿರುಗುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಬಲಿ ತೆಗೆದುಕೊಂಡ ಘಟನೆ ಪೇರೂರಿನ
ಮಂಜಾಟ್ ಪರಿಶಿಷ್ಟ ವರ್ಗದ ಕಾಲೋನಿಯಲ್ಲಿ ಕಳೆದ ರಾತ್ರಿ ನಡೆದಿದೆ. ಇಲ್ಲಿನ ನಿವಾಸಿ ಕೂಲಿ ಕಾರ್ಮಿಕರಾದ ಪಾಲೆ ಜನಾಂಗದ ಅಪ್ಪಣ್ಣ (೪೮) ಎಂಬವರು ಕಾಡಾನೆ ದಾಳಿಯಿಂದ ಮೃತಪಟ್ಟವರಾಗಿದ್ದಾರೆ. ನಿನ್ನೆ ರಾತ್ರಿ ಅಪ್ಪಣ್ಣ ನೆರೆಮನೆಯ ಕುಡಿಯರ ಸುಗುಣ ಎಂಬವರ ಮದುವೆಗೆಂದು ಅವರ ಮನೆಗೆ ತೆರಳಿ ಅಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಊಟೋಪಚಾರದ ನಂತರ ಸುಮಾರು ೧೧ ಗಂಟೆಯ ಸಮಯದಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ದಾರಿಯಲ್ಲಿ ಕಾರ್ಗತ್ತಲಿನ ನಡುವೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ ಅಪ್ಪಣ್ಣ ಅವರನ್ನು ತಿವಿದು ಕೊಂದು ಹಾಕಿದೆ. ವಿಷಯವರಿತ ಅರಣ್ಯ ಇಲಾಖೆಯ ಎ.ಸಿ.ಎಫ್. ಎಂ.ಎನ್. ನವೀನ್, ವಲಯ ಅರಣ್ಯಾಧಿಕಾರಿ ದೇವರಾಜ್, ಸಿಬ್ಬಂದಿ ಮತ್ತು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೋಹನ್, ಹರ್ಷವರ್ಧನ್ ಸ್ಥಳಕ್ಕೆ ಧಾವಿಸಿ ಶವದ ಮಹಜರು ನಡೆಸಿದ್ದಾರೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ಸಾಗಿಸಲಾಯಿತು. ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಘಟನಾ ಸ್ಥಳದಲ್ಲಿ ಊರಿನ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚೂರ ರವೀಂದ್ರ ಮಾತನಾಡಿ, ಈ ವಿಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು ಈ ಬಗ್ಗೆ ಹಲವಾರು ಬಾರಿ ಇಲಾಖೆಯ ಗಮನಕ್ಕೂ ತರಲಾಗಿದೆ. ಕಾಡಾನೆಯಿಂದ ಈ ವಿಭಾಗದ ಜನರು, ಮಕ್ಕಳು, ಕಾರ್ಮಿಕರು ಬೆಳಿಗ್ಗೆಯೇ ನಡೆದಾಡಲು ಭಯಪಡಬೇಕಿದೆ. ಕೂಡಲೇ ಅರಣ್ಯ ಇಲಾಖೆಯವರು ಎಚ್ಚೆತ್ತು ಈ ವಿಭಾಗದಲ್ಲಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸವನ್ನು ಮಾಡಬೇಕಿದೆ. ಅಲ್ಲದೆ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಸರಕಾರದಿಂದ ಸಿಗುವ ಸೌಲಭ್ಯವನ್ನು ಕೂಡಲೇ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
(ಮೊದಲ ಪುಟದಿಂದ)
ಅಧಿಕಾರಿಗಳ ವಿರುದ್ಧ ಕೆಜಿಬಿ ಆಕ್ರೋಶ : ಪೇರೂರಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಅಪ್ಪಣ್ಣ ಅವರ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದ ವೇಳೆ ಭೇಟಿ ನೀಡಿದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಪೇರೂರಿನ ಮಂಜಾಟ್ ಕಾಲೋನಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಆನೆ ಹಾವಳಿ ಹೆಚ್ಚಾಗಿದೆ. ವಿದ್ಯುತ್ ಇದ್ದಿದ್ದರೆ ಅಮಾಯಕನ ಜೀವ ಉಳಿಯುತಿತ್ತು. ಕತ್ತಲಾಗಿದ್ದ ಕಾರಣ ಜೀವ ಹಾನಿಯಾಗಿದೆ. ಅಧಿಕಾರಿಗಳ ನಡೆಯೆ ಈ ದುರ್ಘಟನೆಗೆ ಕಾರಣ. ಹೋದ ಜೀವವನ್ನು ತಂದು ಕೊಡೋಕೆ ಆಗುತ್ತೇನ್ರಿ ನಿಮ್ಗೆ.? ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಪರಿಹಾರ ವಿತರಣೆ : ಕಾಡಾನೆ ದಾಳಿಯಿಂದ ಮೃತರಾದ ಅಪ್ಪಣ್ಣ ಅವರ ಕುಟುಂಬಕ್ಕೆ ತುರ್ತು ಪರಿಹಾರವಾಗಿ ರೂ. ೧ ಲಕ್ಷವನ್ನು ವಿತರಿಸಲಾಗಿದೆ. ಉಳಿದ ಆರೂವರೆ ಲಕ್ಷ ಪರಿಹಾರದ ಹಣವನ್ನು ಒಂದೆರೆಡು ದಿನಗಳಲ್ಲಿ ವಿತರಿಸಲಾಗುತ್ತದೆ ಎಂದು ಎ.ಸಿ.ಎಫ್. ನವೀನ್ ಅವರು ತಿಳಿಸಿದ್ದಾರೆ.
- ದುಗ್ಗಳ / ಪ್ರಭಾಕರ್