ಮಡಿಕೇರಿಯ ಶ್ರೀ ಓಂಕಾರೇಶ್ವರ ದೇಗುಲ ಇದೀಗ ಮರು ಚೇತನದತ್ತ ನಳನಳಿಸುತ್ತಿದೆ. ೧೮೨೦ರಲ್ಲಿ ಆಗಿನ ಕೊಡಗಿನ ರಾಜ ಲಿಂಗರಾಜನಿAದ ಸ್ಥಾಪಿಸಲ್ಪಟ್ಟ ಶ್ರೀ ಓಂಕಾರೇಶ್ವರ ದೇಗುಲಕ್ಕೆ ಪ್ರಸಕ್ತ ಸಾಲಿನಲ್ಲಿ ಇನ್ನೂರು ವರ್ಷ ತುಂಬುತ್ತಿದೆ. ಇಂತಹ ಮಹತ್ವದ ಸನ್ನಿವೇಶದಲ್ಲಿ ದೇಗುಲದೊಳಗೆ ಪ್ರತಿಷ್ಠಾಪಿಸಲ್ಪಟ್ಟ ಕಾಶಿಯಿಂದ ತಂದಿತೆನ್ನಲಾಗಿದ್ದ ಐತಿಹಾಸಿಕ ಶಿವಲಿಂಗ, ಮಹಾಗಣಪತಿ ಹಾಗೂ ಸುಬ್ರಹ್ಮಣ್ಯ ಮೂರ್ತಿಗಳ ಮರುಪ್ರತಿಷ್ಠಾಪನೆ, ಅಷ್ಟಬಂಧ, ಬ್ರಹ್ಮಕಲಶ ಮತ್ತಿತರ ಹೋಮ-ಹವನ ಧಾರ್ಮಿಕ ಕಾರ್ಯಕ್ರಮ ಗಳು ವಿಧ್ಯುಕ್ತವಾಗಿ ಜರುಗುತ್ತಿವೆ. ಶನಿವಾರ ಸಂಜೆಯಿAದ ಪ್ರಾರಂಭಗೊAಡ ಧಾರ್ಮಿಕ ವಿಧಿವಿಧಾನ ಪ್ರಕ್ರಿಯೆಗಳು ತಾ. ೩೦ ರಂದು ರುದ್ರ ಹೋಮ ಹಾಗೂ ಬ್ರಹ್ಮಕಲಶ ಪೂಜೆ ನೆರವೇರಲಿದೆ. ತಾ. ೩೧ ರ ಗುರುವಾರದಂದು ಬೆ. ೯ ಗಂಟೆಗೆ ಪ್ರಾರಂಭಗೊಳ್ಳಲಿರುವ ಅಷ್ಟಬಂಧ ಲೇಪನ ಬಳಿಕ ಬ್ರಹ್ಮಕಲಶ ಅಭಿಷೇಕ ಹಾಗೂ ಮಧ್ಯಾಹ್ನ ೧೨-೩೦ರ ವೇಳೆ ಮಹಾಪೂಜೆ, ಮಂತ್ರಾಕ್ಷತೆ ಯೊಂದಿಗೆ ಕೊನೆಗೊಳ್ಳಲಿದೆ. ಕಳೆದ ೨೬ ವರ್ಷಗಳ ಹಿಂದೆ ದೇವಾಲಯದಲ್ಲಿ ಬ್ರಹ್ಮಕಲಶ ಧಾರ್ಮಿಕ ಕಾರ್ಯಕ್ರಮಗಳು ಈಗ ದಿವಂಗತರಾಗಿರುವ ಉಚ್ಚಿಲದ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಅವರಿಂದ ನೆರವೇರಿಸಲ್ಪಟ್ಟಿತ್ತು. ಆ ಸಂದರ್ಭ ಕೆ. ಎಸ್. ದೇವಯ್ಯ ಅವರು ಮುಜರಾಯಿ ಸಮಿತಿ ಉಪಾಧ್ಯಕ್ಷ ರಾಗಿದ್ದು, ಸಂಪತ್‌ಕುಮಾರ್ ಕಾರ್ಯನಿರ್ವಹಣಾಧಿಕಾರಿ ಯಾಗಿದ್ದರು. ಈಗ ದಿವಂಗತರಾಗಿರುವ ನಾರಾಯಣ ಭಟ್ ಪ್ರಧಾನ ಅರ್ಚಕರಾಗಿದ್ದರು. ಆ ಸಂದರ್ಭ ಪೇಜಾವರ ಮಠಾಧೀಶರಾಗಿದ್ದ ದಿವಂಗತ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ವಿದ್ಯಾ ಭೂಷಣರು ಆಗಮಿಸಿದ್ದರು. ಇನ್ನೂರು ವರ್ಷಗಳ ಇತಿಹಾಸ ಉಳ್ಳ ಈ ದೇವಾಲಯದಲ್ಲಿ ಕಳೆದ ೮೬ ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶದ ಬಳಿಕ ದ್ವಿತೀಯ ಬಾರಿಗೆ ಕಳೆದ ೨೬ ವರ್ಷಗಳ ಹಿಂದೆ ನಡೆದಿದ್ದು, ಇದೀಗ ತೃತೀಯ ಬಾರಿಗೆ ಮತ್ತೆ ಬ್ರಹ್ಮಕಲಶ ಕಾರ್ಯಕ್ರಮಗಳು ಜರುಗುತ್ತಿವೆ.

ಇತ್ತೀಚೆಗೆ ಆಂಜನೇಯ ದೇವಾಲಯದ ಜೀರ್ಣೋದ್ಧಾರ ಕಾರ್ಯ ಗಳಾದಾಗ ಅಷ್ಟಮಂಗಲ ಪ್ರಶ್ನೆಯಲ್ಲಿ ಆಂಜನೇಯ ಜೀರ್ಣೋದ್ಧಾರದ ಬಳಿಕ ಓಂಕಾರೇಶ್ವರದಲ್ಲಿಯೂ ಮರುಪ್ರತಿಷ್ಠಾಪನೆ ಅತ್ಯಗತ್ಯವಾಗಿ ನಡೆಯ ಬೇಕೆಂದು ಪೂರ್ವ ಸೂಚನೆ ದೊರೆತಿತ್ತು. ಪೂರ್ವಾಭಿಮುಖನಾಗಿದ್ದ ಆಂಜನೇಯನನ್ನು ಉತ್ತರಾಭಿಮುಖಕ್ಕೆ ಪ್ರತಿಷ್ಠಾಪಿಸುವ ಮೂಲಕ ಆಂಜನೇಯ ಮತ್ತು ಓಂಕಾರೇಶ್ವರನ ದೃಷ್ಟಿಗಳು ಘರ್ಷಣೆಗೆ ಒಳಗಾಗದೆ ನಾಡಿಗೆ ಒಳಿತಾಗು ತ್ತದೆ. ಆದರೆ ಪೂರ್ಣ ಫಲ ಬರಬೇಕಾದರೆ ಓಂಕಾರೇಶ್ವರನ ಪುನರ್ ಪ್ರತಿಷ್ಠಾಪನೆ ಮಾಡಲೇಬೇಕೆಂದು ಪ್ರಶ್ನೆಯಲ್ಲಿ ಸ್ಪಷ್ಟ ಗೋಚರವಾಗಿತ್ತು. ಇದೀಗ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹಿಂದಿನ ತಂತ್ರಿಯವರ ಪುತ್ರರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಪದ ನಿಮಿತ್ತ ಕಾರ್ಯದರ್ಶಿಯಾಗಿ ಬಿ.ಎಂ. ಕೃಷ್ಣಪ್ಪ ಅವರಿದ್ದು, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಗಳಾಗಿ ಕೆ. ಸುನೀಲ್‌ಕುಮಾರ್, ಟಿ. ಹೆಚ್., ಉದಯಕುಮಾರ್, ಎ. ಎಸ್. ಪ್ರಕಾಶ್ ಆಚಾರ್ಯ, ಯು. ಸಿ. ದಮಯಂತಿ, ಕುರಿಕಡ ಎ. ಆನಂದ್, ಕನ್ನಂಡ ಕವಿತಾ ಕಾವೇರಮ್ಮ ಹಾಗೂ ಪಿ. ಹೆಚ್. ಸೀತಾ ಚಿಕ್ಕಣ್ಣ ಇವರುಗಳಿ ದ್ದಾರೆ.

ಸಂಕಲ್ಪ ಪೂಜೆ : ‘‘ಶಕ್ತಿ’’ಯೊಂದಿಗೆ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ಅವರು ‘‘ದೇವಾಲಯದಲ್ಲಿ ಇದೀಗ ಭಕ್ತಾದಿಗಳು ಸೇವಾರ್ಥ ಕೈಗೊಳ್ಳುವ ಪೂಜೆಗಳನ್ನು ಸಂಕಲ್ಪ ಸಹಿತವಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಪೂಜೆಗಳ ಸಂಖ್ಯೆಯೂ ಹೆಚ್ಚುತ್ತಿದೆ’’ ಎಂದರು. ಅಲ್ಲದೆ ಪ್ರತಿಷ್ಠಾಪನೆ ಬಳಿಕ ಕ್ಷೇತ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ಪೂಜಾ ನಿಯಮಗಳನ್ನು ಇನ್ನೂ ಕ್ರಮಬದ್ಧವಾಗಿ ಅಳವಡಿಸಲಾಗುವುದು. ವ್ಯವಸ್ಥಿತವಾಗಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.