ಸೋಮವಾರಪೇಟೆ, ಡಿ. ೨೮: ಕಳೆದ ಅನೇಕ ದಶಕಗಳಿಂದ ಸುಣ್ಣಬಣ್ಣ ಕಾಣದೆ, ಶಿಥಿಲಾವಸ್ಥೆಗೆ ತಲುಪಿರುವ ಸೋಮವಾರಪೇಟೆಯ ತಾಲೂಕು ಕಚೇರಿಯ ಗೋಳು ಕೊನೆಗೂ ಆಡಳಿತಗಾರರ ಗಮನಕ್ಕೆ ಬಂದಿದ್ದು, ರೂ. ೧.೪೦ ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ಲಭಿಸಿದೆ.
೧೯೯೭ರಲ್ಲಿ ನಿರ್ಮಾಣವಾದ ತಾಲೂಕು ತಹಶೀಲ್ದಾರರ ಕಟ್ಟಡಕ್ಕೆ ‘ಮಿನಿ ವಿಧಾನಸೌಧ’ ಎಂದು ನಾಮಕರಣ ಮಾಡಲಾಗಿದ್ದು, ಸುಮಾರು ೧ ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ನಿರ್ಮಾಣವಾದ ನಂತರದ ವರ್ಷಗಳಲ್ಲಿ ಕಚೇರಿಯ ನಿರ್ವಹಣೆಗೆ ಯಾರೂ ಮುಂದಾಗದ ಹಿನ್ನೆಲೆ ಕೆಲವೇ ವರ್ಷಗಳಲ್ಲಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಇಂದಿಗೂ ಅದೇ ಸ್ಥಿತಿಯಲ್ಲಿದೆ.
ಈ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಖಜಾನೆ, ಚುನಾವಣೆ ಶಾಖೆ, ಆರ್ಟಿಸಿ ವಿತರಣಾ ಕೇಂದ್ರ, ನೆಮ್ಮದಿ ಕೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ, ಭೂಮಿ ಇಲಾಖೆ, ಅಭಿಲೇಖಾಲಯ ಸೇರಿದಂತೆ ಕಂದಾಯ ಇಲಾಖೆಗೆ ಸಂಬAಧಪಟ್ಟ ಎಲ್ಲಾ ವಿಭಾಗಗಳು ಈ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿವೆ.
ಮಳೆಗಾಲದಲ್ಲಂತೂ ಕೊಠಡಿಗಳ ಮೇಲ್ಚಾವಣಿಯಲ್ಲಿ ನೀರು ಜಿನುಗುವ ಪರಿಸ್ಥಿತಿಯಿದ್ದು, ಸೋರಿಕೆಯಾಗುವ ನೀರನ್ನು ಸಿಬ್ಬಂದಿಗಳು ಬಕೇಟ್ಗಳಲ್ಲಿ ಸಂಗ್ರಹಿಸಬೇಕಾದ ಸ್ಥಿತಿ ಇದೆ. ಇದರೊಂದಿಗೆ ಕಚೇರಿಯ ಬಹುತೇಕ ವಿಭಾಗಗಳು ಕಂಪ್ಯೂಟರೀಕರಣ ಗೊಂಡಿದ್ದು, ಶೀತಕ್ಕೆ ಕಂಪ್ಯೂಟರ್ ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳು ವದೇ ಕಷ್ಟಕರವಾದ ಹಿನ್ನೆಲೆ, ಆಗಾಗ್ಗೆ ಕಂಪ್ಯೂಟರ್ ರಿಪೇರಿ, ಪ್ರಿಂಟರ್ ರಿಪೇರಿ ಎಂಬ ಫಲಕಗಳು ತಾಲೂಕು ಕಚೇರಿಯಲ್ಲಿ ಕಂಡುಬರುವುದು ಸಾಮಾನ್ಯ.
ಆರ್ಟಿಸಿ ವಿತರಿಸುವ ವಿಭಾಗದಲ್ಲಂತೂ ಪ್ರತಿವರ್ಷ ಮಳೆಗಾಲದಲ್ಲಿ ಮೇಲ್ಚಾವಣಿಗೆ ಪ್ಲಾಸಿಕ್ ಹೊದಿಕೆಯನ್ನು ಕಟ್ಟಿ ಮಳೆ ನೀರಿನಿಂದ ಬಚಾವಾಗುವ ಪ್ರಯತ್ನ ಮಾಡಬೇಕಿದೆ. ರೆಕಾರ್ಡ್ ರೂಂನಲ್ಲಿ ೧.೩೭ ಲಕ್ಷಕ್ಕೂ ಅಧಿಕ ಕಡತಗಳಿದ್ದು, ಅವುಗಳ ರಕ್ಷಣೆಗೆ ಹರಸಾಹಸ ಪಡಲಾಗುತ್ತಿದೆ. ಭೂಮಿ ಕೇಂದ್ರದಲ್ಲಿ ಮೇಲ್ಚಾವಣಿ ಹಾಗೂ ಗೋಡೆಗಳಲ್ಲಿ ನೀರು ಸೋರುತ್ತಿದೆ.
ಪ್ರಸ್ತುತ ತಾಲೂಕಿನ ಆರು ಹೋಬಳಿ, ೨೯೮ ಗ್ರಾಮಗಳ ಜನರು ಕಂದಾಯ, ಆಹಾರ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕೆಲಸ ಕಾರ್ಯಗಳಿಗೆ ಮಿನಿ ವಿಧಾನಸೌಧಕ್ಕೆ ಬರುತ್ತಾರೆ. (ಕುಶಾಲನಗರ ನೂತನ ತಾಲೂಕಿಗೆ ಸಂಬAಧಿಸಿದAತೆ ಇನ್ನೂ ಪ್ರಕ್ರಿಯೆಗಳು ಬಾಕಿ ಇರುವುದರಿಂದ) ಸಂತೆ ದಿನವಾದ ಸೋಮವಾರ ನೂರಾರು ಮಂದಿ ಕಟ್ಟಡದೊಳಗೆ ಇರುತ್ತಾರೆ. ಕಳೆದ ಏಳೆಂಟು ವರ್ಷಗಳಿಂದ ಕಟ್ಟಡ ಸೋರುತ್ತಿದ್ದು, ಗೋಡೆಗಳು ಶಿಥಿಲಗೊಂಡಿರುವ ಹಿನ್ನೆಲೆ ಕಟ್ಟಡದ ಭವಿಷ್ಯದ ಬಗ್ಗೆ ಆತಂಕ ಮೂಡಿತ್ತು.
ಇದರೊಂದಿಗೆ ಕಟ್ಟಡಕ್ಕೆ ಅಳವಡಿಸಿದ್ದ ಕಿಟಕಿಗಳು ಒಡೆದು ಮಳೆಯ ಎರಚಲು ನೀರು ಕಚೇರಿಯೊಳಗೆ ಬರುವುದು ಸಾಮಾನ್ಯ. ಇದರಿಂದ ರಕ್ಷಣೆ ಪಡೆಯಲು ಕಿಟಕಿಗಳಿಗೆ ಪ್ಲಾಸ್ಟಿಕ್ ಕಟ್ಟುವ ಸ್ಥಿತಿಯಿದೆ.
ಇದೀಗ ಕಚೇರಿ ದುರಸ್ತಿಗೆಂದು ರೂ. ೧.೪೦ ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ಲಭಿಸಿದ್ದು, ಕೆಲವೇ ದಿನಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವದು ಎಂದು ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಹಾಗೂ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ಕುಮಾರ್ ತಿಳಿಸಿದ್ದಾರೆ.
ಕಳೆದ ೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ ರೂ. ೧೦೦ ಕೋಟಿ ವಿಶೇಷ ಪ್ಯಾಕೇಜ್ ಅನುದಾನದಲ್ಲಿ ಸೋಮವಾರಪೇಟೆ ತಾಲೂಕು ಕಚೇರಿ ದುರಸ್ತಿಗೆ ರೂ. ೧.೪೦ ಕೋಟಿ ಅನುದಾನ ಮೀಸಲಿರಿಸಲಾಗಿತ್ತು.
ಇದಕ್ಕೆ ಕಳೆದ ವರ್ಷ ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಮಾರ್ಚ್ ತಿಂಗಳಿನಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿತ್ತು. ಅದೇ ಸಂದರ್ಭ ಕೊರೊನಾ ಮಹಾಮಾರಿಯ ಆರ್ಭಟವೂ ಹೆಚ್ಚಿದ್ದರಿಂದ, ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ಮಂಡ್ಯದ ಅರುಣ್ಕುಮಾರ್ ಎಂಬವರು ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ ಎಂದು ಮೋಹನ್ಕುಮಾರ್ ತಿಳಿಸಿದ್ದಾರೆ.
ಈ ಅನುದಾನದಲ್ಲಿ ಈಗಿರುವ ಕಟ್ಟಡದ ಕಿಟಕಿ ಬಾಗಿಲು ರಿಪೇರಿ, ಕಟ್ಟಡಕ್ಕೆ ಸಂಪೂರ್ಣ ಸುಣ್ಣಬಣ್ಣ ಬಳಿಯುವುದು, ಕಟ್ಟಡದ ಮೇಲ್ಭಾಗ ನೂತನ ಸಭಾಂಗಣ, ಕಚೇರಿ ಕೊಠಡಿಗಳ ನಿರ್ಮಾಣ, ಮಳೆ ನೀರು ಸೋರಿಕೆಯಾಗದಂತೆ ಛಾವಣಿ ಅಳವಡಿಕೆ ಕಾಮಗಾರಿ ಸೇರ್ಪಡೆ ಗೊಂಡಿದ್ದು, ಕೆಲ ದಿನಗಳಲ್ಲಿಯೇ ಕೆಲಸ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. - ವಿಜಯ್ ಹಾನಗಲ್