ಸಿದ್ದಾಪುರ, ಡಿ. ೨೯: ಮನೆಯಲ್ಲಿ ರಾತ್ರಿ ಊಟಕ್ಕೆ ಕುಳಿತ ಸಂದರ್ಭ ಮೂವರ ಮೇಲೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿ, ಆರೋಪಿಗಳು ಪರಾರಿಯಾಗಿರುವ ಘಟನೆ ಸಿದ್ದಾಪುರದ ಕರಡಿಗೋಡುವಿನಲ್ಲಿ ನಡೆದಿದೆ.

ಕರಡಿಗೋಡು ನದಿ ತೀರದಲ್ಲಿ ವಾಸ ಮಾಡಿಕೊಂಡಿರುವ ವಿಲ್ಸನ್ (೩೭) ಎಂಬವರ ಪತ್ನಿ ಶ್ರೀಜ ಸ್ನಾನದ ಕೊಠಡಿಯಲ್ಲಿದ್ದ ಸಂದರ್ಭ ರಾಮದಾಸ್ (೩೧) ಎಂಬಾತ ಸ್ನಾನದ ಕೊಠಡಿಯ ಕದ ತಟ್ಟಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಶ್ರೀಜಾಳ ಅಕ್ಕನ ಮಗಳು (ಅಪ್ರಾಪ್ತೆ) ಹಾಗೂ ರಾಮದಾಸ್‌ನೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ರಾಮದಾಸ್ ಹಿಂತಿರುಗಿದ್ದಾನೆ. ಈ ವಿಚಾರವನ್ನು ಶ್ರೀಜಾ ರಾಮದಾಸ್ ಮನೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಬಳಿಕ ರಾತ್ರಿ ಸಮಯದಲ್ಲಿ ರಾಮದಾಸ್ ಹಾಗೂ ಆತನ ಸ್ನೇಹಿತರಾದ ಅಶೋಕ್ (೨೯) ಹಾಗೂ ಉಣ್ಣಿಕೃಷ್ಣ (೨೮) ಮೂವರು ಸೇರಿ ವಿಲ್ಸನ್ ಮನೆಯ ಒಳಗೆ ಪ್ರವೇಶ ಮಾಡಿ ಶ್ರೀಜಾಳ ಅಕ್ಕನ ಮಗಳ ಎದೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದು, ರಕ್ಷಿಸಲು ಬಂದ ವಿಲ್ಸನ್ ಹೊಟ್ಟೆಗೆ ಚಾಕುವಿನಿಂದ ಬಲವಾಗಿ ಇರಿದಿದ್ದಾನೆ. ಪರಿಣಾಮ ವಿಲ್ಸನ್‌ನ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಮನೆಯಲ್ಲಿದ್ದ ವಿಲ್ಸನ್ ಸಂಬAಧಿ ಸ್ಟೀಫನ್‌ಗೂ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಮೂವರಿಗೆ ಗಾಯವಾಗಿದ್ದು, ಮನೆಯಲ್ಲಿದ್ದ ಶ್ರೀಜಾ ಕಿರುಚಾಡಿದ ಪರಿಣಾಮ ಸ್ಥಳೀಯರು ವಿಲ್ಸನ್ ಮನೆಯ ಕಡೆಗೆ ಧಾವಿಸಿದ್ದಾರೆ. ಈ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ವಿಲ್ಸನ್, ಸ್ಟೀಫನ್ ಹಾಗೂ ಶ್ರೀಜಾಳ ಅಕ್ಕನ ಮಗಳನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೈಸೂರು ಆಸ್ಪತ್ರೆಯಲ್ಲಿ ಮೂವರು ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲಿಸಿದ್ದು, ಮೂವರ ಪೈಕಿ ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಊಟ ಮಾಡುವ ಸಂದರ್ಭದಲ್ಲಿ ಹಲ್ಲೆ : ವಿಲ್ಸನ್ ಹಾಗೂ ಕುಟುಂಬಸ್ಥರು ರಾತ್ರಿ ಊಟಕ್ಕೆ ಕುಳಿತ ಸಂದರ್ಭ ರಾಮದಾಸ್ ಏಕಾಏಕಿ ಮನೆಯೊಳಗೆ ಪ್ರವೇಶಿಸಿದ್ದಾನೆ. ಇನ್ನೇನು ತುತ್ತು ಅನ್ನ ತಿನ್ನಲು ಮುಂದಾಗಿದ್ದ ವಿಲ್ಸನ್, ಸ್ಟೀಫನ್ ಹಾಗೂ ಶ್ರೀಜಾಳ ಅಕ್ಕನ ಮಗಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ಊಟದ ಕೋಣೆ ರಕ್ತಸಿಕ್ತವಾಗಿದೆ. ಹಲ್ಲೆ ನಡೆಸಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳಾದ ರಾಮದಾಸ್, ಉಣ್ಣಿಕೃಷ್ಣ, ಅಶೋಕ್ ಈ ಮೂವರ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಡಿ ಮೊಕದ್ದಮೆ ದಾಖಲಾಗಿದೆ. ಸಿದ್ದಾಪುರ ಠಾಣಾಧಿಕಾರಿ ಮೋಹನ್‌ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪರಾರಿಯಾದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜನತೆ ಆತಂಕ: ಗ್ರಾಮದಲ್ಲಿ ಚಾಕುವಿನಿಂದ ಇರಿದ ಘಟನೆ ಕಂಡ ಗ್ರಾಮಸ್ಥರು ಭಯಭೀತರಾಗಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ಮದ್ಯ ಹಾಗೂ ಗಾಂಜಾ ವ್ಯಸನಿಗಳಾಗಿದ್ದು, ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕೆAದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.