ಮಡಿಕೇರಿ, ಡಿ. ೨೯: ಬ್ಯಾಂಕ್ ವ್ಯವಹಾರಗಳಲ್ಲಿ ಕನ್ನಡವನ್ನು ಮಾಧ್ಯಮವಾಗಿ ಬಳಸಬೇಕು. ಈ ಮೂಲಕ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗುವುದರೊಂದಿಗೆ ಕನ್ನಡ ಭಾಷೆಗೆ ಪ್ರಾಧಾನ್ಯತೆ ದೊರೆಯುವಂತೆ ಆಗುತ್ತದೆ ಎಂದು ಕನ್ನಡ ಜಾಗೃತಿ ಸಮಿತಿಯ ಎಸ್. ಮಹೇಶ್ ಅವರು ಒತ್ತಾಯಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ಅವರು, ರಾಜ್ಯಾದ್ಯಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯ ಬಳಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು ಜಿಲ್ಲೆಯಲ್ಲಿಯೂ ಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದರು.ಈ ಸಂಬAಧ ಪ್ರತಿಕ್ರಿಯಿಸಿದ ಆರ್.ಕೆ. ಬಾಲಚಂದ್ರ ಅವರು, ಈಗಾಗಲೇ ಸುತ್ತೋಲೆ ಹೊರಡಿಸಿದ್ದು ಭಾಷೆ ಬಳಕೆ ಅನುಷ್ಠಾನಗೊಳಿ ಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕೆಲವು ಬ್ಯಾಂಕ್‌ಗಳು ಈ ಸಂಬAಧ ಅಸಡ್ಡೆಯಿಂದ ವರ್ತಿಸುತ್ತಿವೆ. ಕನ್ನಡ ಭಾಷೆ ಬಳಕೆಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಲಚಂದ್ರ ಅವರು ಕನ್ನಡ ಭಾಷೆಯ ಬಳಕೆಯನ್ನು ಸ್ವಾಗತಿಸಿರುವುದು ಶ್ಲಾಘನೀಯ ಎಂದು ಈ ಸಂದರ್ಭ ಹೇಳಿದರು.

ಮನವಿ ಸಲ್ಲಿಸಿದ ಸಂದರ್ಭ ಕನ್ನಡ ಜಾಗೃತಿ ಸಮಿತಿಯ ರಜಿತಾ ಕಾರ್ಯಪ್ಪ, ಭಾರತಿ ರಮೇಶ್, ಇ. ರಾಜು, ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಪರಿಷತ್‌ನ ಮಾಜಿ ತಾಲೂಕು ಅಧ್ಯಕ್ಷ ಮುನೀರ್ ಅಹ್ಮದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಪ್ರೇಮನಾಥ್, ಲಕ್ಷಿö್ಮಕಾಂತ್, ಕೊಮಾರಪ್ಪ ಹಾಗೂ ಇತರರು ಹಾಜರಿದ್ದರು.

ಬೇಡಿಕೆಗಳು: ಬ್ಯಾಂಕಿನ ಎಲ್ಲ ವ್ಯವಹಾರಗಳು, ಸುತ್ತೋಲೆಗಳು, ಮಾಹಿತಿಗಳು ಕನ್ನಡದಲ್ಲಿರಬೇಕು. ಬ್ಯಾಂಕಿನ ಜಾಲತಾಣಗಳು, ಎ.ಟಿ.ಎಂ. ವ್ಯವಹಾರ ಎಲ್ಲವೂ ಕನ್ನಡದಲ್ಲಿರಬೇಕು. ಬ್ಯಾಂಕಿನಲ್ಲಿ ಸೂಚನಾ ಫಲಕಗಳು ಹಾಗೂ ಪ್ರದರ್ಶನ ಪತ್ರಗಳು ಕನ್ನಡದಲ್ಲಿರಬೇಕು. ಇತರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನೀಡಲಾಯಿತು.