ಮಡಿಕೇರಿ, ಡಿ. ೨೯: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ‘ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ ಕಾರ್ಯ ಕ್ರಮಕ್ಕೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಮೊದಲು ಓಂಕಾರೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಶ್ರೀಗಳು, ಬಳಿಕ ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಮಹಿಳೆಯರು ಕಳಸ ಹೊತ್ತು ಶ್ರೀಗಳನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು, ಶ್ರೀ ರಾಮಚಂದ್ರ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣದ ಶತಮಾನದ ಕನಸು ನನಸಾಗುತ್ತಿದೆ. ಪವಿತ್ರ ಸ್ಥಳದ ಮೇಲಾದ ದಾಳಿಯಿಂದ ಪರರ ಸ್ವತ್ತಾಗಿದ್ದ ನೆಲೆ ಇದೀಗ ಮೂಲವನ್ನು ಕಂಡುಕೊಳ್ಳುತ್ತಿದೆ. ಸಾಧು, ಸಂತರು, ಭಕ್ತಾದಿಗಳ ಪ್ರಾಣತ್ಯಾಗ ಹಾಗೂ ನಿರಂತರ ಹೋರಾಟ ಮಾಡಿದ ಫಲವಾಗಿ ನ್ಯಾಯಾಲಯದ ಮೂಲಕ ಹಿಂದೂ ಭಾವನೆಯ ಸಂಕೇತವಾದ ರಾಮ ಜನ್ಮಭೂಮಿ ದೊರೆತಿದೆ. ಟ್ರಸ್ಟ್ ರಚಿಸಿ ಮಂದಿರ ನಿರ್ಮಿಸುವ ಜವಾಬ್ದಾರಿಯನ್ನು ನ್ಯಾಯಾಲಯ ನೀಡಿದೆ. ಎಲ್ಲರನ್ನು ಒಂದುಗೂಡಿಸಿ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಮುಂದಾಗಿದೆ. ರಾಮ ಮಂದಿರ ಎಲ್ಲರ ಮಂದಿರವಾಗಬೇಕೆAಬ ಕನಸಿದೆ. ಈ ನಿಟ್ಟಿನಲ್ಲಿ ಸರ್ವರೂ ಕೈಜೋಡಿಸಬೇಕು. ರಾಮಸೇತು ನಿರ್ಮಾಣಕ್ಕೆ ಅಳಿಲು ಕೂಡ ಸೇವೆ ಮಾಡಿದ ರೀತಿಯಲ್ಲಿ ಹಿಂದೂ ಸಮಾಜ, ರಾಮ ಭಕ್ತರು ಕೈಜೋಡಿಸಿದರೆ ಮಂದಿರ ನಿರ್ಮಾಣ ಮಾಡುವುದು ಕಷ್ಟದ ಮಾತಲ್ಲ. ಕನಿಷ್ಟ ೧೦ ರೂಪಾಯಿ ನೆರವನ್ನು ಭಕ್ತಾದಿಗಳು ನೀಡಬೇಕು. ೧೦ ರೂಪಾಯಿ ಆಗಲಿ, ರೂ. ೧೦ ಕೋಟಿ ಸಹಾಯ ಮಾಡಿದರು ಸಂತೋಷದಿAದ ಸ್ವೀಕರಿಸುತ್ತೇವೆ ಎಂದರು. ನಿಧಿ ಸಮರ್ಪಣೆ ದುರುಪ ಯೋಗ ಆಗಬಾರದು. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ಜನವರಿ ೧೫ ರಿಂದ ೪೫ ದಿನಗಳ ಅಭಿಯಾನ ಆರಂಭಗೊಳ್ಳಲಿದೆ. ಪ್ರತಿ ಮನೆಗೆ ಸ್ವಯಂ ಸೇವಕರು ತೆರಳಿ ನಿಧಿ ಸಂಗ್ರಹಿಸಲಿದ್ದಾರೆ. ರೂ. ೫೦೦ ಕೋಟಿ ವೆಚ್ಚದಲ್ಲಿ ಮಂದಿರ ನಿರ್ಮಾಣ ವಾಗಲಿದೆ. ಜೊತೆಗೆ ಸಹಸ್ರ ಕೋಟಿ ವೆಚ್ಚದಲ್ಲಿ ಮಂದಿರದ ಸುತ್ತಲಿನ ಪ್ರದೇಶ ಅಭಿವೃದ್ಧಿಪಡಿಸಲಾಗುವುದು ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.
(ಮೊದಲ ಪುಟದಿಂದ)
ಸಮಾಜ ಮರು ನಿರ್ಮಾಣ
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾತನಾಡಿ, ಜನರು ನೀಡಿದ ಹಣ ರಾಮ ಮಂದಿರ ನಿರ್ಮಾಣ ಹಾಗೂ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಬಳಕೆಯಾಗಲಿದೆ. ಇಚ್ಛಾಶಕ್ತಿ ಇದ್ದರೆ ಅಭಿಯಾನ ವಿಫಲವಾಗುವುದಿಲ್ಲ. ಇದರೊಂದಿಗೆ ರಾಮ ರಾಜ್ಯದ ಪರಿಕಲ್ಪನೆ ಸಾಕಾರವಾಗಬೇಕು. ರಾಮ ರಾಜ್ಯದಲ್ಲಿ ಬೇಡುವವರು ಇರಲಿಲ್ಲ, ಸಮೃದ್ಧ ಸಮಾಜವಾಗಿತ್ತು. ದ್ವೇಷ, ಅಸೂಯೆ ಇರಲಿಲ್ಲ. ಪ್ರೀತಿ ಮಾತ್ರ ಇರುತಿತ್ತು. ಅದೇ ರೀತಿ ಸಮಾಜ ಮರು ನಿರ್ಮಾಣವಾಗಬೇಕೆಂದು ಆಶಯ ವ್ಯಕ್ತಪಡಿಸಿದರು.
ಮನುಷ್ಯ ಆಶಾಜೀವಿ, ಬದುಕು ರೂಪಿಸಿಕೊಳ್ಳುವ ವೇಗದಲ್ಲಿ ಬೇರೆಯವರಿಗೆ ನೋವಾದರೂ ಅವರ ಬದುಕು ಮುಖ್ಯವಾಗಿರುತ್ತದೆ. ರಾಮರಾಜ್ಯದಲ್ಲಿ ಅದು ಇರುವುದಿಲ್ಲ. ಇದರಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಭಕ್ತಾದಿಗಳ ಹೃದಯದಲ್ಲಿ ಮೊದಲು ರಾಮ ಮಂದಿರ ನಿರ್ಮಾಣವಾಗಬೇಕು. ಸಾತ್ವಿಕತೆ ಸೃಷ್ಟಿಯಾಗಬೇಕು. ಕಲ್ಲು, ಕಾಗದ, ಮಣ್ಣಿನ ರಾಮ ಭಕ್ತಿಗಿಂತ ಹೃದಯದಲ್ಲಿ ರಾಮನ ಚಿಂತನೆ ಇರಬೇಕು. ನಾವೇ ರಾಮನ ರೀತಿ ನಡೆದುಕೊಳ್ಳಬೇಕು. ಅರಿಷಡ್ವರ್ಗವನ್ನು ಕೊಂದು ಎಲ್ಲರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ನೈಜ ಭಕ್ತಾದಿಗಳ ಮಂದಿರ
ಪೊನ್ನAಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪ ಸ್ವಾಮೀಜಿ ಅವರು ಮಾತನಾಡಿ, ೧೯೮೦ರ ದಶಕದಲ್ಲಿ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಅಭಿಯಾನ ನಡೆದಿತ್ತು. ಹಲವು ವಿವಾದಗಳ ಬಳಿಕ ಇದೀಗ ರಾಮಮಂದಿರ ಕನಸು ನನಸಾಗಿದೆ. ಶ್ರದ್ಧಾಭಕ್ತಿಯ ಪೂಜೆ ಎಂದಿಗೂ ವಿಫಲವಾಗುವುದಿಲ್ಲ ಎನ್ನುವುದಕ್ಕೆ ರಾಮಮಂದಿರ ಪರ ತೀರ್ಪು ಸಾಕ್ಷಿಯಾಗಿದೆ. ಸುದೀರ್ಘ ಸಮಯ ತೆಗೆದುಕೊಂಡರೂ ಭಾರತೀಯರ ಅಸ್ಮಿತೆಯಾಗಿರುವ ರಾಮ ಮಂದಿರ ತಲೆ ಎತ್ತಲಿರುವುದು ಸಂತಸದ ವಿಚಾರವಾಗಿದೆ.
ದೇವಾಲಯ ನಿರ್ಮಾಣದ ಬಳಿಕ ಅದೊಂದು ಶ್ರದ್ಧಾ ಕೇಂದ್ರವಾಗಲಿದೆ. ಓರ್ವ ಶ್ರೀಮಂತ ಇಡೀ ಮಂದಿರ ಕಟ್ಟುವ ಬದಲು, ನೈಜ ಭಕ್ತಾದಿಗಳ ಮಂದಿರವಾಗಿ ರಾಮ ಜನ್ಮಭೂಮಿ ಇರಬೇಕು. ಸಾಮಾಜಿಕ ಕೆಲಸ ಮಾಡಲು ಹಣಕ್ಕೆ ಬರವಿಲ್ಲ. ಕೊಡಗಿನಲ್ಲಿ ೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ದೇಶದ ಮೂಲೆಮೂಲೆಯಿಂದ ಬಂದ ನೆರವು ಉದಾಹರಣೆಯಾಗಿದೆ. ಸಂಕಲ್ಪ ನಿಸ್ವಾರ್ಥವಾಗಿದ್ದರೆ ಹಣಕ್ಕೆ ತೊಂದರೆಯಾಗುವುದಿಲ್ಲ. ತ್ಯಾಗ ಮತ್ತು ಸೇವೆ ಅವಳಿ ಆದರ್ಶ ಭಾರತೀಯರಲ್ಲಿ ರಕ್ತಗತವಾಗಿದೆ. ಹಾಗಾಗಿ ಮಂದಿರ ನಿರ್ಮಾಣ ಯಶಸ್ವಿಯಾಗಲಿದೆ ಎಂದರು.
ಹೊಸ ವಸಂತ ಕಾಲ
ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಪ್ರಮುಖ ನಾ ಸೀತಾರಾಮ ಅವರು ಮಾತನಾಡಿ, ಪುಣ್ಯಕ್ಷೇತ್ರವನ್ನು ಧ್ವಂಸಗೊಳಿಸಿದ ನಂತರ ಹಿಂದೂ ಸಮಾಜ ಸುಮ್ಮನಿರಲಿಲ್ಲ. ನಿರಂತರ ಹೋರಾಟ ನಡೆಸಿತು. ಮಂದಿರ ನಿರ್ಮಾಣಕ್ಕಾಗಿ ೭೭ ಯುದ್ಧ, ೩ ಲಕ್ಷ ಜನರ ಬಲಿದಾನವಾಯಿತು. ಸ್ವಾತಂತ್ರಾö್ಯ ನಂತರದಲ್ಲಿ ಸಾಧು, ಸಂತರ ನೇತೃತ್ವದಲ್ಲಿ ಹೋರಾಟ ರೂಪಿಸಿ, ರಾಮ ಜನ್ಮಭೂಮಿಯಲ್ಲಿ ಹೋರಾಟದ ಸ್ವರೂಪದಲ್ಲಿ ನಿರಂತರ ಪೂಜೆ, ಭಜನೆ ನಡೆಸಲಾಯಿತು. ಜಾತ್ಯತೀತತೆ ಹೆಸರಿನಲ್ಲಿ ಒಂದು ವರ್ಗಕ್ಕೆ ಸುಣ್ಣ, ಮತ್ತೊಂದು ವರ್ಗಕ್ಕೆ ಬೆಣ್ಣೆಯ ರೀತಿಯ ಕೇಂದ್ರ ಸರ್ಕಾರ ಇದ್ದ ಹಿನ್ನೆಲೆ ಮಂದಿರಕ್ಕೆ ಬೀಗ ಹಾಕಲಾಯಿತು. ಅಂದು ಸಂಘಟಿತ ಶಕ್ತಿ ಇರಲಿಲ್ಲ. ರಾಷ್ಟç ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ‘ರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ’ ರಚನೆಗೊಂಡು ಹೋರಾಟ ಮುಂದುವರೆಸಿತು. ಮೂರು ವರ್ಷದಲ್ಲಿ ಬೀಗ ತೆರೆದು ರಾಮ ನೆಲೆಗೆ ಮುಕ್ತ ಅವಕಾಶ ನೀಡಿತು. ಸಂಘಟಿತ ಹೋರಾಟದ ಮೊದಲ ಗೆಲುವು ಅದಾಗಿತ್ತು. ಸಂತರ ಮಾರ್ಗದರ್ಶನದಂತೆ ವಿವಿಧ ಆಯಾಮದಲ್ಲಿ ಹೋರಾಟ ಮುಂದುವರೆಯಿತು. ಕರಸೇವೆ ಮಾಡಿ ಇಟ್ಟಿಗೆಗಳು ಸಂಗ್ರಹಿಸಿದ ಪರಿಣಾಮ ಅಭಿಯಾನದ ಶಕ್ತಿ ಹೆಚ್ಚಾಯಿತು. ಅಂದಿನ ಸರ್ಕಾರ ಕರಸೇವೆಗೆ ಅಡ್ಡಿ ಮಾಡಿತ್ತು, ಭಕ್ತಾದಿಗಳು ಅದನ್ನೆಲ್ಲ ಮೆಟ್ಟಿ ನಿಂತು ಮಂದಿರಕ್ಕೆ ತೆರಳಿ ಭಗವಾ ಧ್ವಜ ಹಾರಿಸಿತು. ಇದು ಹಿಂದೂ ಸಮಾಜದ ಶಕ್ತಿ ಅನಾವರಣ ಮಾಡಿದೆ. ರಾಮ ಮಂದಿರದ ಜೊತೆಗೆ ರಾಷ್ಟç ಮಂದಿರ ನಿರ್ಮಾಣ ವಾಗಬೇಕು. ಹಿಂದೂ ಸಮಾಜವನ್ನು ನೋಡುವ ರೀತಿ ಇತ್ತೀಚಿಗೆ ಬದಲಾಗಿದೆ. ಪ್ರಪಂಚದಲ್ಲಿ ಮನ್ನಣೆ ದೊರೆತಿದೆ. ಹೊಸ ವಸಂತ ಕಾಲ ಸೃಷ್ಟಿಯಾಗಿದೆ ಎಂದರು.
ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪು ನ್ಯಾಯಾಂಗ ಲೋಕದಲ್ಲಿ ಐತಿಹಾಸಿಕ ತೀರ್ಪು ಎಂದು ಹೇಳಲಾಗುತ್ತದೆ. ತೀರ್ಪನ್ನು ಸಹಜವಾಗಿ ಸ್ವೀಕರಿಸಿದ್ದು ಹಿಂದೂ ಸಮಾಜದ ಸದ್ಗುಣವನ್ನು ತೋರಿಸುತ್ತದೆ. ಇದೀಗ ವಿವಾದ ಸಂಪೂರ್ಣ ಬಗೆಹರಿದು ಮಂದಿರ ನಿರ್ಮಾಣ ಪ್ರಕ್ರಿಯೆ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ. ಕೊರೊನಾ ಪರಿಸ್ಥಿತಿ ನಡುವೆ ಭೂಮಿಪೂಜೆ ನೆರವೇರಿಸಲಾಗಿದೆ. ಟ್ರಸ್ಟ್ ಮೂಲಕ ರೂಪುರೇಷೆ ತಯಾರಾಗಿದೆ ಎಂದರು.
ಗ್ರಾಮಗಳ ಮಟ್ಟದಲ್ಲಿ ಕಾರ್ಯಕರ್ತರ ತಂಡ ರಚನೆ ಮಾಡಿ ಸಹಾಯ ಪಡೆದುಕೊಳ್ಳಬೇಕು. ಭಕ್ತಿ ಇರುವ ಎಲ್ಲರು ಸಹಾಯ ನೀಡಬಹುದು. ಆದರೆ, ಪ್ರಚಾರ ಮಾಡದೇ, ಗೌರವದಿಂದ ಸಹಾಯ ನೀಡಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಮಯವನ್ನು ಸಮರ್ಪಣೆ ಮಾಡಬೇಕು. ಕಾರ್ಯಕರ್ತರು ಸಂಘಟನೆ ವ್ಯವಸ್ಥೆಯೊಳಗಿರಬೇಕು. ಹಣ ಸಂಗ್ರಹಿಸಿದ ೨೪ ಗಂಟೆಯೊಳಗೆ ಬ್ಯಾಂಕ್‌ಗೆ ಹಣವನ್ನು ನೇರವಾಗಿ ಟ್ರಸ್ಟ್ ಖಾತೆಗೆ ಪಾವತಿಸಬಹುದು. ಡಿಜಿಟಲ್ ಬ್ಯಾಂಕ್ ಮೂಲಕ ಪಾರದರ್ಶಕತೆ ವ್ಯವಸ್ಥೆ ಮಾಡಲಾಗಿದೆ. ಯಾರು ಬೇಕಾದರು ನಿಧಿ ಸಂಗ್ರಹದ ಮಾಹಿತಿ ಪಡೆದುಕೊಳ್ಳಬಹುದು. ಸರ್ಕಾರದ ನಿಯಮಾನುಸಾರ ಹಣ ಸಂಗ್ರಹವಾಗುತ್ತದೆ ಎಂದರು.
ಮೈಸೂರಿನ ರಾಮಕೃಷ್ಣ ಆಶ್ರಮದ ಶ್ರೀ ವಿಶ್ವ ವಿದಾನಂದ ಸ್ವಾಮೀಜಿ, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸಂಘ ಚಾಲಕ ಮನು ಕಾವೇರಪ್ಪ, ವಿಶ್ವ ಹಿಂದೂ ಪರಿಷತ್ ಪ್ರಮುಖ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ಶಾಸಕ ಅಪ್ಪಚ್ಚು ರಂಜನ್, ಸಭೆಯಲ್ಲಿ ಹಾಜರಿದ್ದರು. ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಜಿ.ಪಂ. ಅಧ್ಯಕ್ಷ ಹರೀಶ್ ಮೊದಲಾದವರು ಭಾಗವಹಿಸಿದ್ದರು.
ರವಿ ಭೂತನಕಾಡು ಪ್ರಾರ್ಥಿಸಿ, ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ನರಸಿಂಹ ಸ್ವಾಗತಿಸಿ, ರೀನಾ ಪ್ರಕಾಶ್ ವಂದಿಸಿದರು.
ಬ್ರಾಹ್ಮಣ ವಿದ್ಯಾಭಿವೃದ್ಧಿ ಕಟ್ಟಡ ಕಾಮಗಾರಿ ವೀಕ್ಷಿಸಿದ ಪೇಜಾವರ ಶ್ರೀ
ನಗರದಲ್ಲಿ ನಿರ್ಮಾಣವಾಗುತ್ತಿರುವ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಶತಮಾನೋತ್ಸವ ಭವನ ಕಾಮಗಾರಿಯನ್ನು ಉಡುಪಿಯ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ವೀಕ್ಷಿಸಿದರು.
ಬಳಿಕ ಸಂಸ್ಥೆಯ ಪ್ರಮುಖರು ಫಲ, ತಾಂಬೂಲ ನೀಡಿ ಆಶೀರ್ವಾದ ಪಡೆದುಕೊಂಡರು. ಕಟ್ಟಡ ಕಾಮಗಾರಿ ಉತ್ತಮ ರೀತಿಯಲ್ಲಿ ಪೂರ್ಣಗೊಳ್ಳಲಿ, ಸಂಘ ಜನಪರವಾಗಿ ಕಾರ್ಯೋನ್ಮುಖವಾಗಲಿ ಎಂದು ಆಶೀರ್ವಚನ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಮ ಮಂದಿರ ನಿರ್ಮಾಣದ ಕನಸು ಈಡೇರಿದೆ. ಪ್ರಪಂಚದಲ್ಲಿರುವ ಭಕ್ತಾದಿಗಳು ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು. ನಿರ್ಮಾಣ ಕಾರ್ಯ ಆರಂಭಿಸುವ ನಿಟ್ಟಿನಲ್ಲಿ ಕೆಲಸಗಳು ಆರಂಭಗೊAಡಿದೆ. ಭೂಮಿಯನ್ನು ೨೦೦ ಅಡಿಗಳಷ್ಟು ಅಗೆಯಲಾಗಿದೆ. ಗಟ್ಟಿ ಮಣ್ಣು ದೊರೆತ ನಂತರ ಅಡಿಪಾಯ ಹಾಕುವ ಕೆಲಸ ಆರಂಭವಾಗುತ್ತದೆ. ಭಕ್ತಾದಿಗಳು ಕೈಲಾದಷ್ಟು ಸಹಾಯವನ್ನು ಮಾಡಬೇಕೆಂದು ಕರೆ ನೀಡಿದರು. ಗೋಹತ್ಯೆ ನಿಷೇಧಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಕಠಿಣ ಕಾನೂನಿನಿಂದ ಗೋಹತ್ಯೆಗೆ ಕಡಿವಾಣ ಬೀಳಲಿದೆ ಎಂದರು.
ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಬ್ರಾಹ್ಮಣ ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ವಿದ್ಯಾಭಿವೃದ್ಧಿ ನಿಧಿಯ ನಿರ್ದೇಶಕರು ಇದ್ದರು.
ಪೇಜಾವರ ಮಠಾಧೀಶರು ಇಂದು ಆಂಜನೇಯ ದೇಗುಲದ ಬಳಿ ಅಯೋಧ್ಯಾ ನಿಧಿ ಸಮರ್ಪಣಾ ಕಾರ್ಯಾಲಯವನ್ನು ಉದ್ಘಾಟಿಸಿದರು. ಶ್ರೀಗಳು ಶ್ರೀ ಓಂಕಾರೇಶ್ವರ ದೇಗುಲಕ್ಕೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡರು.