ಕಣಿವೆ, ಡಿ. ೨೭ : ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಿಂದಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಲಕ್ಷಾಂತರ ರೂಗಳ ಹಣ ದುರುಪಯೋಗ ಮಾಡಿರುವ ಬಗ್ಗೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ.

ಡಿ.ಆರ್.ಪ್ರೇಮಕುಮಾರ್ ಎಂಬವರು ಅಧ್ಯಕ್ಷರಾಗಿ ಹಾಗೂ ನಾಗೇಶ್ ಎಂಬವರು ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಅಪಾರ ಪ್ರಮಾಣದ ಹಣ ದುರುಪಯೋಗವಾಗಿರುವುದಾಗಿ ಹಾಲಿ ಅಧ್ಯಕ್ಷ ಕುಮಾರ್ ದೂರಿದ್ದಾರೆ.

ತಾ. ೧೭ ರಂದು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಕರೆಯಲಾಗಿತ್ತಾದರೂ, ಹಣ ದುರುಪಯೋಗವಾಗಿರುವ ವಿಚಾರವನ್ನು ಹಲವು ಸದಸ್ಯರು ಪ್ರಸ್ತಾಪಿಸಿ, ಲಕ್ಷಾಂತರ ರೂಗಳ ಹಣ ದುರುಪಯೋಗ ಮಾಡಿರುವವರ ವಿರುದ್ಧ ಸಹಕಾರ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಿ ದುರುಪಯೋಗವಾಗಿರುವ ಹಣವನ್ನು ಮರಳಿ ಸಂಘಕ್ಕೆ ಕಟ್ಟಿಸಿಕೊಳ್ಳಬೇಕು ಎಂದು ಗದ್ದಲ ಉಂಟಾಯಿತು. ಸಭೆಯಲ್ಲಿದ್ದ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ.ಹೇಮಂತಕುಮಾರ್ ಹಾಗೂ ವಿಸ್ತರಣಾಧಿಕಾರಿ ವೀಣಾ ಅವರಿಗೆ ದೂರು ನೀಡಿದ ಸಂಘದ ಸದಸ್ಯರು ಸಂಘದಲ್ಲಿ ಹಣ ದುರುಪಯೋಗವಾಗಿರುವುದರಿಂದ ಸಂಘದ ಲೆಕ್ಕಪರಿಶೋಧನೆ ನಡೆಸಬೇಕು. ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು ಎಂದು ಸಂಘದ ಅಧ್ಯಕ್ಷ ಕುಮಾರ್ ವಿವರಿಸಿದರು.

ಕಾರ್ಯದರ್ಶಿಯಾಗಿದ್ದ ನಾಗೇಶ್ ಸಂಘದಿAದ ಪ್ರತಿ ದಿನವೂ ಚಿಕ್ಕಳುವಾರದ ವಿವಿ ಕ್ಯಾಂಪಸ್‌ನ ಹಾಸ್ಟೆಲ್ ಗೆ ೩೦ ಲೀ. ಹಾಲನ್ನು ಲೀಟರ್‌ಗೆ ತಲಾ ೩೫ ರೂ.ಗಳಂತೆ ಮಾರಾಟ ಮಾಡಿ ಅವರಿಂದ ಪ್ರತೀ ತಿಂಗಳು ತನ್ನ ವಯುಕ್ತಿಕ ಖಾತೆಗೆ ಚೆಕ್ ಪಡೆದು ಲಕ್ಷಾಂತರ ರೂಗಳ ಅವ್ಯವಹಾರ ನಡೆಸಿದ್ದಾರೆ. ಅಲ್ಲದೇ ಸಂಘಕ್ಕೆ ಪ್ರತಿ ದಿನ ಹಾಲು ಹಾಕುವ ರೈತರಿಗೆ ಸರ್ಕಾರ ನೀಡುವ ಬೋನಸ್ ಹಣವನ್ನು ಸಂಘದ ಖಾತೆಗೆ ಹಾಕದೇ ಹೆಬ್ಬಾಲೆಯಲ್ಲಿನ ಕೆನರಾ ಬ್ಯಾಂಕಿನ ತನ್ನ ವೈಯಕ್ತಿಕ ಖಾತೆಗೆ ಒಂದು ಲಕ್ಷದ ೩ ಸಾವಿರ ರೂಗಳನ್ನು ಹಾಕಿಸಿಕೊಂಡು ವಂಚಿಸಿದ್ದಾರೆ. ಇದೇ ರೀತಿ ಕಳೆದ ಐದು ವರ್ಷಗಳಿಂದ ವ್ಯಾಪಕವಾದ ಹಣ ದುರುಪಯೋಗವಾಗಿದೆ. ಸಂಘದಿAದ ಪ್ರತೀ ದಿನ ಸ್ಥಳೀಯವಾಗಿ ಮಾರಾಟವಾಗುವ ೨೦ ಲೀಟರ್‌ಗೂ ಅಧಿಕ ಪ್ರಮಾಣದ ಹಾಲಿನ ದರದಲ್ಲೂ ಮೋಸವೆಸಗಲಾಗಿದೆ. ಅಲ್ಲದೇ ಸಂಘದ ಸದಸ್ಯರಿಂದ ಪಡೆದು ಕೂಡಿಗೆ ಡೇರಿಗೆ ಕಳುಹಿಸುವ ಹಾಲಿನ ತೂಕದಲ್ಲು ವ್ಯತ್ಯಾಸ ಮಾಡಿ ಅದರಿಂದಲೂ ಹಣ ದುರುಪಯೋಗ ಮಾಡಿಕೊಂಡಿರುವುದಾಗಿ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಲಿಖಿತ ಮಾಹಿತಿಗಳೊಂದಿಗೆ ದೂರಿದ್ದಾರೆ.

ತಾ.೧೭ ರಂದು ಕರೆದ ಮಹಾಸಭೆಯಲ್ಲಿ ಭಾಗಿಯಾಗಿದ್ದ ಹಿಂದಿನ ಕಾರ್ಯದರ್ಶಿ ನಾಗೇಶ್ ತಾನು ಹಣ ದುರುಪಯೋಗ ಮಾಡಿಕೊಂಡಿರುವುದು ಸತ್ಯವಾಗಿದ್ದು, ಆ ಹಣವನ್ನು ವಾರದೊಳಗೆ ಮರಳಿ ಸಂಘಕ್ಕೆ ಪಾವತಿಸುವುದಾಗಿ ಲಿಖಿತವಾಗಿ ಬರೆದುಕೊಟ್ಟ ಬಗ್ಗೆ ಅಧ್ಯಕ್ಷರು ಮಾಹಿತಿ ನೀಡಿದರು.

ಕಳೆದ ೩೦ ವರ್ಷಗಳಿಂದ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿರುವ ಹಾಲು ಉತ್ಪಾದಕರ ಸಂಘದಲ್ಲಿ ಕಳೆದ ಐದು ವರ್ಷಗಳಲ್ಲಿ ಲಕ್ಷಾಂತರ ರೂಗಳ ಅವ್ಯವಹಾರ ನಡೆದಿರುವುದು ಸಂಘದ ಸದಸ್ಯರಲ್ಲಿ ಆತಂಕ ಮೂಡಿಸಿದೆ. ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಡಿ.ಆರ್.ಪ್ರೇಮಕುಮಾರ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರ ಬೇಜವಾಬ್ದಾರಿಯೂ ಈ ಅವ್ಯವಹಾರಕ್ಕೆ ಕಾರಣವಾಗಿದೆ.