*ಗೋಣಿಕೊಪ್ಪ, ಡಿ. ೨೭: ಹುದಿಕೇರಿ ಆಟೋ ಚಾಲಕರ ಮತ್ತು ವಾಹನ ಚಾಲಕರ ಸಂಘದ ವತಿಯಿಂದ ಗ್ರಾಮದ ಶ್ರೇಯಸ್ಸಿಗೆ ಸೇವೆ ಸಲ್ಲಿಸಿದ ಪೊಲೀಸ್ ಮುಖ್ಯಪೇದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವೈದ್ಯಾಧಿಕಾರಿ ಹಾಗೂ ಸರ್ವೆ ಇಲಾಖೆಯ ಅಧಿಕಾರಿ ಸೇರಿ ನಾಲ್ವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಹುದಿಕೇರಿ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಗ್ರಾಮದ ಅಭಿವೃದ್ಧಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಕಾರ್ಯಚಟುವಟಿಕೆಯಿಂದ ಜನರ ಮೆಚ್ಚುಗೆಗೆ ಪಾತ್ರವಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್, ಆಟೋ ಚಾಲಕರ ಸಂಘಕ್ಕೆ ಅವಿರತವಾಗಿ ಸಹಕರಿಸುತ್ತಿರುವ, ಇತ್ತೀಚಿಗಷ್ಟೇ ಸರ್ವೆ ಇಲಾಖೆಯಲ್ಲಿ ಮುಂಬಡ್ತಿ ಹೊಂದಿದ ಹುದಿಕೇರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಾನಂಡ ಅರುಣ್ ಅವರನ್ನು, ಕೊರೊನಾ ಸಂದರ್ಭದಲ್ಲಿ ತಮ್ಮ ಕುಟುಂಬದಿAದ ದೂರ ಉಳಿದು ಹುದಿಕೇರಿ ಪಟ್ಟಣದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಶ್ರೀಮಂಗಲ ಪೊಲೀಸ್ ಠಾಣೆಯ ಮುಖ್ಯಪೇದೆ ಮಾಣಿಯಪಂಡ ಉತ್ತಪ್ಪ ಹಾಗೂ ಜನರು ಆರೋಗ್ಯದಿಂದ ಇರುವಂತೆ ಸಲಹೆ-ಸೂಚನೆಗಳನ್ನು ನೀಡುತ್ತಾ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಚಿಕಿತ್ಸೆ ನೀಡಿದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರೇಖಾ ಇವರುಗಳ ಸೇವೆಯನ್ನು ಪರಿಗಣಿಸಿ, ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹುದಿಕೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪರಮೇಶ್ ಅವರು ಹುದಿಕೇರಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಕನಸು ಹೊಂದಿದ್ದೇನೆ. ಇದಕ್ಕೆ ಸ್ಥಳೀಯರ ಬೆಂಬಲ ಅಗತ್ಯ. ಹಲವು ವರ್ಷ ಗಳಿಂದ ನಡೆಯದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಮನಗಂಡು ಶೀಘ್ರದಲ್ಲಿ ಪರಿಹರಿಸಲಾಗಿದೆ. ಬೀದಿ ದೀಪಗಳು, ಸೋಲಾರ್ ದೀಪ, ಕಸ ಘಟಕಗಳು ಸೇರಿದಂತೆ ಸುಮಾರು ೩೪ಕ್ಕೂ ಹೆಚ್ಚು ಪಂಚಾಯಿತಿಯ ಕಾರ್ಯಕ್ರಮಗಳ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿದರು.

ಕಸ ಸಮಸ್ಯೆಯನ್ನು ಬಗೆಹರಿಸಲು ವಿಶೇಷ ಯೋಜನೆ ರೂಪಿಸಿ ಪ್ರತಿ ಮನೆಗಳಿಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ನೀಡಿ ಒಣಕಸ, ಹಸಿ ಕಸ ವಿಂಗಡಿಸಿ ನೀಡುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಆದರೆ ಪಟ್ಟಣದಲ್ಲಿರುವ ಮದ್ಯದ ಅಂಗಡಿ ನಮ್ಮ ಈ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ. ಅಂಗಡಿಯ ತ್ಯಾಜ್ಯಗಳನ್ನು ನೇರವಾಗಿ ಘಟಕದ ಮುಂಭಾಗದಲ್ಲೇ ಸುರಿದು ಕಲುಷಿತ ವಾತಾವರಣ ನಿರ್ಮಿಸಲು ಕಾರಣವಾಗುತ್ತಿದ್ದಾರೆ. ಹಲವು ಬಾರಿ ಈ ಬಗ್ಗೆ ಮನವಿ ಮಾಡಿದರೂ ವಿಮುಕ್ತರಾಗಿಲ್ಲ. ಮೇಲಧಿಕಾರಿ ಗಳೊಂದಿಗೆ ಮಾತನಾಡಿ ನೋಟೀಸ್ ನೀಡುವ ಮೂಲಕ ದಂಡ ವಿಧಿಸಿ ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ, ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.